ಕಮಲಶಿಲೆ: ಚಲಿಸುತ್ತಿದ್ದ ಬೈಕಿಗೆ ಅಡ್ಡ ಬಂದ ಕಡವೆ: ಬೈಕ್ ಸವಾರ ಸಾವು, ಸಹ ಸವಾರ ಗಂಭೀರ

ಕುಂದಾಪುರ: ಚಲಿಸುತ್ತಿದ್ದ ಬೈಕ್ ಗೆ ಕಡವೆ(ಸಾಂಬಾರ್ ಜಿಂಕೆ)ಯೊಂದು ಅಡ್ಡಲಾಗಿ ಓಡಿ ಬಂದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ಸೆ.13 ರಂದು ಶನಿವಾರ ಸಂಜೆ ಕಮಲಶಿಲೆ ಸಮೀಪ ತಾರೆಕೊಡ್ಲು ಎಂಬಲ್ಲಿ ನಡೆದಿದೆ.

ಮೃತಪಟ್ಟ ಬೈಕ್ ಸವಾರನನ್ನು ಕಂಡ್ಲೂರು ಸಮೀಪದ ಕಾವ್ರಾಡಿಯ ಶ್ರೇಯಸ್ ಮೊಗವೀರ (23) ಎಂದು ಗುರುತಿಸಲಾಗಿದೆ. ಸಹ ಸವಾರ ವಿಘ್ನೇಶ್ ಗಂಭೀರ ಗಾಯಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಶ್ರೇಯಸ್ ಹಾಗೂ ವಿಘ್ನೇಶ್ ಇಬ್ಬರು ಸ್ನೇಹಿತರಾಗಿದ್ದು, ಶನಿವಾರ ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದರು. ದೇವಿ ದರ್ಶನ ಮುಗಿಸಿದ ಬಳಿಕ ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ ತಾರೆಕೊಡ್ಲು ಸಮೀಪ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಬೈಕಿನ ಹಿಂಬದಿಯ ಚಕ್ರ ಕಿತ್ತುಕೊಂಡು ಬಂದಿದೆ. ಮೃತ ಸವಾರ ಶ್ರೇಯಸ್ ಕಡವೆಯನ್ನು ಅಪ್ಪಿಕೊಂಡ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿರುವ ದೃಶ್ಯ ಆಘಾತ ಮೂಡಿಸುತ್ತಿತ್ತು. ಘಟನೆಯಲ್ಲಿ ಕಡವೆಯೂ ಮೃತಪಟ್ಟಿದೆ.

ಶಂಕರನಾರಾಯಣ ಠಾಣೆಯ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.