ವಿದ್ಯಾರಣ್ಯ: ಗುರುವೇ ಮಕ್ಕಳ ಬದುಕಿಗೆ ದೀವಿಗೆ- ಡಾ.ಮಾಧವಿ ಎಸ್. ಭಂಡಾರಿ
ಅಪಘಾತದಲ್ಲಿ ಸಾವನ್ನಪ್ಪಿದ ಶಿಕ್ಷಕನಿಗೆ 10 ಲಕ್ಷ ಪರಿಹಾರ ನೀಡಿ ಮಾನವೀಯತೆ ಮೆರೆದ ಸುಜ್ಞಾನ್
ಕುಂದಾಫುರ: ಬ್ರಹ್ಮ ಜಗತ್ತನ್ನು ಸೃಷ್ಟಿಸುತ್ತಾನೆ. ಗುರುವೆಂಬ ಪರಬ್ರಹ್ಮ ಮಕ್ಕಳ ಬದುಕಿಗೆ ದೀವಿಗೆಯಾಗುತ್ತಾನೆ. ನಮ್ಮ ಬದುಕಿನಲ್ಲಿ ಹೆತ್ತ ತಾಯಿ ಮೊದಲ ಗುರು. ಸತ್ಯ, ಧರ್ಮ, ನ್ಯಾಯ ನೀತಿಯ ಬಗ್ಗೆ ಮನೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುವವಳು ತಾಯಿ. ತದನಂತರ ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿರುತ್ತದೆ. ಗುರುವು ತ್ರಿಮೂರ್ತಿಗಳ ಸ್ವರೂಪ ಎಂದು ವಿವರಿಸಿದರು.ಇನ್ನು ಶಿಕ್ಷಕರು ಕೂಡ ಮಕ್ಕಳ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಮಕ್ಕಳಿಗೆ ಜೀವನದ ಮೌಲ್ಯ ಕಲಿಸಿಕೊಡಬೇಕುಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಮಾಧವಿ ಎಸ್. ಭಂಡಾರಿ ಶನಿವಾರ ನುಡಿದರು.

ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಿಕ್ಷಕರನ್ನು ಶಿಲ್ಪಿಗಳೆನ್ನುತ್ತಾರೆ. ಸಮಾಜವನ್ನು ತಿದ್ದುವವರು ಶಿಕ್ಷಕರು. ತಾವು ಕಲಿಸಿದ ವಿದಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಹೆತ್ತವರಿಗಿಂತ ಹೆಚ್ಚು ಖುಷಿ ಪಡುವವರು ಶಿಕ್ಷಕರೇ ಆಗಿರುತ್ತಾರೆ. ಇಂದಿನ ಮಕ್ಕಳು ಸೋಶಿಯಲ್ ಮೀಡಿಯಾಕ್ಕೆ ಜೋತು ಬಿದ್ದಿದ್ದಾರೆ. ಶಿಕ್ಷಕರು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರೇರೇಪಿಸಬೇಕು ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಯಾವುದೇ ವ್ಯಕ್ತಿಯು ಸನ್ಮಾರ್ಗದಲ್ಲಿ ಸಾಗಬೇಕಾದರೆ ಒಬ್ಬ ಗುರುವಿನ ಮಾರ್ಗದರ್ಶನ ಅಗತ್ಯ; ಹಾಗೆಯೇ, ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಇವತ್ತಿನ ದಿನಗಳಲ್ಲಿ ಈ ಗುರು-ಶಿಷ್ಯರ ಬಾಂಧವ್ಯದಲ್ಲಿ ಕೊರತೆ ಕಂಡುಬರುತ್ತಿದ್ದು, ಇದಕ್ಕೆ ಆಸ್ಪದ ನೀಡಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ದೇಶ ಕಟ್ಟುವ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ನಮ್ಮ ದೇಶದಲ್ಲಿ ಶಿಕ್ಷಕರಿಗೆ ಉನ್ನತ ಗೌರವಾದರಗಳಿವೆ. ಅದನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ. ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಯು ವೈದ್ಯಕೀಯ ಅಥವಾ ಐಐಟಿ ಸೀಟು ಪಡೆದ ಸಂದರ್ಭದಲ್ಲಿ, ಸಂಸ್ಥೆಯ ವತಿಯಿಂದ ಪ್ರತಿ ವಿದ್ಯಾರ್ಥಿಯ ಪರವಾಗಿ ಐದು ಸಾವಿರ ರೂಪಾಯಿಗಳನ್ನು ಭಾರತೀಯ ಸೇನಾ ನಿಧಿಗೆ ಕೊಡುಗೆ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಶಿಕ್ಷಕ ಸಂತೋಷ್ ಅವರ ಕುಟುಂಬಕ್ಕೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು,ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಒಗ್ಗೂಡಿ ಈ ದೊಡ್ಡ ಮೊತ್ತವನ್ನು ಸಂಗ್ರಹಿಸಿದ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗಿದ್ದು, ಮೃತರ ಪತ್ನಿ ಜಯಶ್ರೀ ಅವರ ಹೆಸರಿನಲ್ಲಿ ಠೇವಣಿ ಇಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಉಪಸ್ಥಿತರಿದ್ದರು. ರಜತ್ ಭಟ್ ನಿರೂಪಿಸಿದರು.
