ಕುಂದಾಪುರ: ಕೆಜಿಎಫ್‌ನ ಬಾಂಬೆ ಡಾನ್ ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ನಿಧನ
ಕುಂದಾಪುರ: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು ಕೆ.ಜಿ.ಎಫ್‌ನ ಬಾಂಬೆ ಡಾನ್ ಮತ್ತು ತಮ್ಮ ಕಲಾ ನಿರ್ದೇಶನದಿಂದಲೇ ಹೆಸರು ಮಾಡಿದ್ದ ದಿನೇಶ್ ಮಂಗಳೂರು ಸೋಮವಾರ ಬೆಳಿಗ್ಗೆ (ಆಗಸ್ಟ್ 25) ಕುಂದಾಪುರದ ಕೋಟೇಶ್ವರ ಸರ್ಜನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೆ ಸ್ಟೋಕ್ ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಊರಿಗೆ ಮರಳಿದ್ದರು. ಮತ್ತೆ ಅಸ್ವಸ್ಥಗೊಂಡು ಕೋಟೇಶ್ವರದ ಸರ್ಜನ್ ಆಸ್ಪತ್ರೆಗೆ ದಾಖಲಾಗಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ದಿನೇಶ್ ಮಂಗಳೂರು, ಕಲಾವಿದನಾಗಬೇಕೆಂದು ಬಯಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ‘ಆ ದಿನಗಳು’, ‘ಕೆಜಿಎಫ್’ ‘ಉಳಿದವರು ಕಂಡಂತೆ’, ‘ಕಿಚ್ಚ’, ‘ಕಿರಿಕ್ ಪಾರ್ಟಿ’ ಮುಂತಾದ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು.

ಆದರೆ ಅವರಿಗೆ ಆರಂಭದಲ್ಲಿ ಒಲಿದಿದ್ದು ಕಲಾ ನಿರ್ದೇಶನ. ನಂ 73 ಶಾಂತಿನಿವಾಸ ಸೇರಿ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ದಿನೇಶ್ ಮಂಗಳೂರು ಅವರಿಗೆ ಒಬ್ಬ ಕಲಾವಿದನಾಗಿ ಕೆ.ಎಂ. ಚೈತನ್ಯ ನಿರ್ದೇಶನದ ”ಆ ದಿನಗಳು” ಚಿತ್ರ ಹೆಸರು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ಸೀತಾರಾಮ್ ಶೆಟ್ಟಿ ಪಾತ್ರಕ್ಕೆ ದಿನೇಶ್ ಮಂಗಳೂರು ಜೀವ ತುಂಬಿದ್ದರು.

ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ, ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದರುವಾಗಲೇ ದಿನೇಶ್ ಮಂಗಳೂರು ನಿಧನ ಚಿತ್ರರಂಗಕ್ಕೆ ಬರಸಿಡಿಲೆರಗಿದಂತಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.