ಬಿಜೆಪಿ ನಾಯಕಗೆ ನಿಂದನೆ ಆರೋಪ : ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಡುಪಿ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು – ಗರಂ ಆದ ಜಡ್ಜ್?

ಉಡುಪಿ: ಬಿಜೆಪಿ ರಾಷ್ಟ್ರೀಯ ನಾಯಕ, ಆರೆಸ್ಸೆಸ್ಸ್ ಮುಖಂಡ ಬಿ.ಎಲ್.ಸಂತೋಷ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿದ್ದಾರೆ ಎಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಇಂದು ಶನಿವಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಉಡುಪಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.


ಮಧ್ಯಾಹ್ನ ಸುಮಾರು 1.20ರ ವೇಳೆಗೆ ಪೊಲೀಸ್ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಮತ್ತೆ ನ್ಯಾಯಾಲಯದಿಂದ ಕರೆದೊಯ್ಯಲಾಗಿದ್ದು, ಸಂಜೆ 3.30ರ ಸುಮಾರಿಗೆ ಮತ್ತೆ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಮಹೇಶ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆಗೆ ಸಂಭಂಧಿಸಿ ಬ್ರಹ್ಮಾವರ ಪೊಲೀಸರು ಮತ್ತಷ್ಟು ದಿನ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಕಸ್ಟಡಿ ಗೆ ಕೇಳಿದ್ದರೆನ್ನಲಾಗಿದೆ. ಆದರೆ ಇದಕ್ಕೆ ಗರಂ ಆದ ನ್ಯಾಯಾಧೀಶರು, ಮೊನ್ನೆ ಯಾವ ಕಾರಣಕ್ಕೆ ಪೊಲೀಸ್ ಕಸ್ಟಡಿಗೆ ಕೇಳಿಲ್ಲ? ಕಸ್ಟಡಿಗೆ ಬೇಕಿದ್ದರೆ ಬೆಳಿಗ್ಗೆನೇ ಹಾಜರುಪಡಿಸಬೇಕಿತ್ತು. ಮಹಜರು, ರಿಕವರಿ ಏನೇ ಇದ್ದರೂ ಎರಡು ಗಂಟೆಯಲ್ಲಿ ಪೂರ್ಣಗೊಳಿಸಿ ಎಂದು ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಬಳಿಕ ಕೇವಲ ಎರಡು ಗಂಟೆಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿದ್ದು, 3:40ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.


ಅಲ್ಲದೇ ಮಹೇಶ್ ಶೆಟ್ಟಿ ತಿಮರೋಡಿಯವರ ಜಾಮೀನು ಅರ್ಜಿ ವಿಚಾರಣೆಯೂ ಇದೇ ಸಂದರ್ಭ ನಡೆಯಲಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತದೆಯೇ ಇಲ್ಲವೇ ಕಾದು ನೋಡಬೇಕಿದೆ.