ಯಕ್ಷತಾರೆ ಅಶ್ವಿನಿ ಕೊಂಡದಕುಳಿ ಹೆಸರಿನ ನಕಲಿ ಜಾಲತಾಣದಲ್ಲಿ ಅಶ್ಲೀಲ ಚಿತ್ರ ಪೋಸ್ಟ್ – ಪೊಲೀಸ್ ದೂರು ಕೊಟ್ಟರೂ ಇಲ್ಲ ಪ್ರಯೋಜನ

ಕುಂದಾಪುರ: ಪ್ರಸಿದ್ಧ ಯಕ್ಷಗಾನ ತಾರೆ, ಪ್ರಾದ್ಯಾಪಕಿ ಅಶ್ವಿನಿ ಕೊಂಡದಕುಳಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಅಶ್ಲೀಲ ಎನಿಸುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.



ಪ್ರಸಿದ್ಧ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ ಜಾಲತಾಣಗಳಲ್ಲಿ ಪ್ರೊಫೈಲ್ ನಲ್ಲಿ ಅಶ್ವಿನಿ ಹೆಸರು ಮತ್ತು ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ.


ಅಲ್ಲದೆ ಅತ್ಯಂತ ಕೀಳುಮಟ್ಟದ ಬರಹಗಳನ್ನು ಬರೆಯಲಾಗಿದೆ. ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿದ್ದು, ಇದರಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತಿದ್ದು, ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸೆನ್ ಪೊಲೀಸರು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಂದಿದ್ದು, ಅದರಂತೆ ಅಶ್ವಿನಿ ಅವರು ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕುಂದಾಪುರ ಪೊಲೀಸರು ದೂರು ಸ್ವೀಕರಿಸಿದ್ದು, ಎನ್.ಸಿ. ಮಾಡಿದ್ದಾರೆ.



ಆದರೆ ಇದುವರೆಗೆ ಯಾವುದೇ ಕ್ರಮ ಜರುಗದ ಪರಿಣಾಮ ಕಿಡಿಗೇಡಿಗಳು ಸೃಷ್ಟಿಸಿದ ನಕಲಿ ಖಾತೆಗಳು ಇನ್ನೂ ಚಾಲ್ತಿಯಲ್ಲಿವೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಅಲ್ಲದೇ ಸಾಮಾಜಿಕ ಜಾಲತಾಣಗಳ ಬಳಕೆದಾರರು ಸಾಧ್ಯವಾದಷ್ಟು ಈ ಖಾತೆಗಳನ್ನು ರಿಪೋರ್ಟ್ ಮಾಡಬೇಕು ಎಂದು ಅಶ್ವಿನಿ ಕೊಂಡದಕುಳಿ ಮನವಿ ಮಾಡಿದ್ದಾರೆ.
