ಬ್ರಹ್ಮಾವರ: ಕ್ವಿಂಟಾಲ್ ಗಟ್ಟಲೆ ಪಡಿತರ ಅಕ್ಕಿ ಅಕ್ರಮ ಸಾಗಾಟ – ಅಕ್ಕಿ ಸಹಿತ ಸೊತ್ತುಗಳು ವಶಕ್ಕೆ
ಬ್ರಹ್ಮಾವರ: ಕ್ವಿಂಟಾಲ್ ಗಟ್ಟಲೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಬ್ರಹ್ಮಾವರ ಆಹಾರ ನಿರೀಕ್ಷಕರು ಅಡ್ಡಗಟ್ಟಿದಾಗ ಆರೋಪಿ ವಾಹನ ಚಾಲಕ ಪರಾರಿಯಾಗಿದ್ದು, ವಾಹನ, ಅಕ್ಕಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದ ಘಟನೆ ಬ್ರಹ್ಮಾವರ ತಾಲೂಕು ಉಳ್ಳೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ನಡೆದಿದೆ.

ಗುಂಡ್ಮಿ ನಿವಾಸಿ ಮಹಮ್ಮದ್ ಎಂಬಾತನಿಗೆ ಸೇರಿದ ಓಮಿನಿ ವಾಹನದಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋದಾಗ, ಸ್ಥಳದಲ್ಲಿದ್ದ ಓಮಿನಿ ವಾಹನದ ಚಾಲಕನು ವಾಹನವನ್ನು ನಿಲ್ಲಿಸಿ ಅಲ್ಲಿಂದ ಓಡಿಹೋಗಿದ್ದು, ಅದರಂತೆ ಪಿರ್ಯಾದಿದಾರರು ಠಾಣೆಗೆ ಬಂದು ಪಂಚರ ಸಮಕ್ಷಮ ಅಕ್ಕಿ ತುಂಬಿರುವ ವಾಹನವನ್ನು ಪರೀಶೀಲಿಸಿದಾಗ KA.20.C.1287 ನೇ ಮಾರುತಿ ಸುಜುಕಿ ಕಂಪನಿಯ ಓಮಿನಿ ವಾಹನ ವಾಹನದಲ್ಲಿ 29 ಚೀಲಗಳಲ್ಲಿ ಒಟ್ಟು 8 ಕ್ವಿಂಟಲ್ 21 ಕೆ.ಜಿ ಅಕ್ಕಿ ಇದ್ದು, ಸದ್ರಿ ಅಕ್ಕಿ ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಸರಕಾರ ಉಚಿತವಾಗಿ ಪಡಿತರ ಚೀಟಿದಾರರಿಗೆ ವಿತರಿಸುವ ಪಡಿತರ ಅಕ್ಕಿ ಎಂದು ಕಂಡು ಬಂದಿದ್ದು, ಸದ್ರಿ ಅಕ್ಕಿಯ ಅಂದಾಜು ಬೆಲೆ 19,704/- ರೂಪಾಯಿ ಆಗಬಹುದು. ಓಮಿನಿ ವಾಹನದ ಅಂದಾಜು ಬೆಲೆ ಸುಮಾರು 1,00,000/- ರೂಪಾಯಿ ಆಗಬಹುದು.

ವಾಹನದಲ್ಲಿದ್ದ ತೂಕದ ಮೇಶಿನ್ ಅಂದಾಜು ಮೌಲ್ಯ 2,000/-ರೂಪಾಯಿ ಆಗಬಹುದು. ಅಕ್ಕಿ, ತೂಕದ ಮೇಶಿನ್ ಹಾಗೂ ಓಮಿನಿ ವಾಹನವನ್ನು ಪಂಚರ ಸಮಕ್ಷಮ ಮಹಜರು ಕ್ರಮ ಜರುಗಿಸಿ ಒಟ್ಟು 1,21,704/- ಮೌಲ್ಯ ದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರ.ಸಂ :218/2026 Us 3,7 EC Act And US 3(2), 18(1) PDS Control order 2016 03 ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ಅಕ್ರಮ ಅಕ್ಕಿ ವ್ಯಾಪಾರ ನಡೆಸುತ್ತಿರುವ ಆರೋಪ ಹೊಂದಿರುವ ಮಹಮ್ಮದ್, ಅಕ್ರಮ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆಯೇ ಪ್ರಕರಣ ದಾಖಲಿಸಿದ್ದು, ಇದೀಗ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ. ತಪ್ಪಿತಸ್ಥ ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
