ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಕುಂದಾಪುರದಲ್ಲಿ ಜನಾಗ್ರಹ ಸಭೆ ಮತ್ತು ಜಾಥ

ಕುಂದಾಪುರ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸಾಮಾಜಿಕ ಬದಲಾವಣೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ತ್ರೀಸಬಲೀಕರಣ, ಆರ್ಥಿಕ ಸಮಾನತೆಯಾಗಿದೆ. ಜ್ಞಾನದೀಪ ಕಾರ್ಯಕ್ರಮದಡಿ ಶಿಕ್ಷಣ ಕ್ಷೇತ್ರಕ್ಕೆ ಸಹಕಾರ, ಕೆರೆಗಳ ಪುನಶ್ಚತನ, ದೇವಸ್ಥಾನಗಳ ಜೀರ್ಣೋದ್ದಾರ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಧರ್ಮಸ್ಥಳ ಮಹತ್ತರವಾದ ಕೊಡುಗೆ ನೀಡಿದೆ. ಆದರೆ ಇತ್ತೀಚೆಗೆ ಶ್ರೀಕ್ಷೇತ್ರ ಮತ್ತು ಹೆಗ್ಗಡೆಯವರ ವರ್ಚಸ್ಸಿನ ಮೇಲೆ ಕಳಂಕ ತರುವ ಕೆಲಸ ಆಗುತ್ತಿದೆ. ಧರ್ಮಸ್ಥಳದ ಧಾರ್ಮಿಕ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ಬಗ್ಗೆ ವಿನಾ ಕಾರಣ ನಿರಂತರವಾಗಿ ಅಪಪ್ರಚಾರ, ತೇಜೋವಧೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಕಳಂಕ ತರುವ ಪ್ರಕ್ರಿಯೆ ನಿಲ್ಲಬೇಕು ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಹೇಳಿದರು.

ಅವರು ಕುಂದಾಪುರ ಶಾಸ್ತ್ರೀವೃತ್ತದ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಕುಂದಾಪುರ ತಾಲೂಕು ಇವರ ನೇತೃತ್ವದಲ್ಲಿ ನಡೆದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಕುಂದಾಪುರದಲ್ಲಿ ಜನಾಗ್ರಹ ಸಭೆ ಮತ್ತು ಜಾಥವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಕಸಾಪ ಸ್ಥಾಪಕಧ್ಯಕ್ಷ, ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಅವರು ಶ್ರೀಕ್ಷೇತ್ರದ ಮೂಲಕ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ನಮ್ಮ ಬದುಕಿನ ಸ್ತರಸ್ತರಗಳಲ್ಲೂ ಹಾಸು ಹೊಕ್ಕಾಗಿದೆ. ಇಂಥಹ ಕ್ಷೇತ್ರದ ಮೇಲೆ ಕೆಸರೆರೆಚುವ ಕೆಲಸ ಆಗುತ್ತಿರುವುದು ಖಂಡನಾರ್ಹ, ನಾವೆಲ್ಲಾ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದರು.

ಹಿಂದೂ ಸಮಾಜದ ಮುಖಂಡರಾದ ಪ್ರೇಮಾನಂದ ಶೆಟ್ಟಿ ಕಲ್ಕೆರೆ ಮಾತನಾಡಿ ಇದು ಹಿಂದೂ ಸಮಾಜದ ಶ್ರದ್ದಾಕೇಂದ್ರದ ಮೇಲಿನ ವ್ಯವಸ್ಥಿತವಾದ ದಾಳಿಯಾಗಿದೆ. ಇವತ್ತು ಸಮಾಜವನ್ನು ಸಂಘಟಿಸುವುದು ಧಾರ್ಮಿಕ ಕ್ಷೇತ್ರಗಳು. ಇಂಥಹ ಅಪಪ್ರಚಾರ, ಅವಹೇಳನದ ಮೂಲಕ ಹಿಂದೂ ಸಮಾಜದ ಪ್ರಮುಖವಾದ ಶ್ರದ್ದಾಕೇಂದ್ರವನ್ನು ಹಿನ್ನೆಡೆಗೊಳಿಸುವ ಕೆಲಸವಾಗುತ್ತಿದೆ. ಇಂಥಹ ಘಟನೆಗಳು ಪುನರಾವರ್ತನೆಯಾಗಬಾರದು. ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ಮೇಲೆ ಕ್ರಮವಾಗಬೇಕು ಎಂದರು.

ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಧರ್ಮಸ್ಥಳ ದೇವಸ್ಥಾನ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕಳಂಕ ತರುತ್ತಿರುವ ವ್ಯಕ್ತಿಗಳ ಮೇಲೆ ಕ್ರಮವಾಗುತ್ತದೆ ಎನ್ನುವ ವಿಶ್ವಾಸವಿದೆ. ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಜನರ ಮುಂದಿದೆ ಎಂದರು.

ಬಿಲ್ಲವ ಸಮಾಜದ ಮುಖಂಡ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಪರ೦ಪರೆ, ಸಂಸ್ಕೃತಿಯ ಶ್ರದ್ಧಾಕೇಂದ್ರ ಧರ್ಮಸ್ಥಳ. ವಿಶೇಷವಾಗಿ ಕುಂದಾಪುರ ಭಾಗದ ಜನರು ಧರ್ಮಸ್ಥಳ ಕ್ಷೇತ್ರವನ್ನು ನಂಬಿ ಆರಾಧಿಸುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ಧಾರ್ಮಿಕ ಶ್ರದ್ಧಾಕೇಂದ್ರದ ರಕ್ಷಣೆ ಮಾಡಬೇಕಾಗಿದೆ ಎಂದರು.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ ಕೊಡ್ಲಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ನವೀನಚಂದ್ರ ಶೆಟ್ಟಿ ರಟ್ಟಾಡಿ, ಬಸವರಾಜ ಶೆಟ್ಟಿಗಾರ್ ಕೋಟೇಶ್ವರ, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಡಾ.ಅತುಲ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಉಮೇಶ ಶೆಟ್ಟಿ ಶಾನ್ಕಟ್ಟು, ಹಿಂದೂ ಸಂಘಟನೆಯ ಮುಖಂಡ ಶಂಕರ ಅಂಕದಕಟ್ಟೆ, ಸಭಾಂಗಣ ಮಾಲೀಕರ ಸಂಘದ ಪ್ರದೀಪಚಂದ್ರ ಶೆಟ್ಟಿ. ಪತ್ರಕರ್ತ ಯು.ಎಸ್ ಶೆಣೈ, ರಾಜೇಶ ಕಾವೇರಿ, ಮಂಜು ಬಿಲ್ಲವ, ರಾಜೇಂದ್ರ ಕುಮಾರ್ ಬಸ್ರೂರು, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಉದಯಕುಮಾರ್ ಶೆಟ್ಟಿ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಕುಂದಾಪುರ ತಾಲೂಕು ಇದರ ಸುಬ್ರಹ್ಮಣ್ಯ ಶೆಟ್ಟಿ ನಿರೂಪಿಸಿದರು. ಬಳಿಕ ಕುಂದಾಪುರ ಮುಖ್ಯರಸ್ತೆಯಲ್ಲಿ ಬೃಹತ್ ಜಾಥಾ ಸಾಗಿತು. ಧರ್ಮಸ್ಥಳದ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಜಾಥಾ ಸಹಾಯಕ ಆಯುಕ್ತರ ಕಛೇರಿಗೆ ಸಾಗಿ, ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು
