ಹಟ್ಟಿಯಂಗಡಿ: ಕರಕುಶಲ ಕಲೆಗಳು ಜೀವನಕ್ಕೆ ಬೆಳಕಾಗುತ್ತವೆ – ರಾಜೇಶ್ವರಿ ಕೆ ಎಮ್.
ಕುಂದಾಪುರ: ಡಿಜಿಟಲೀಕರಣ ಇರುವುದು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೇ ವಿನಃ ಮನೋರಂಜನೆಗಾಗಿ ಅಲ್ಲ. ಭಾರತೀಯ ಪರಂಪರೆಯಲ್ಲಿ ಕರಕುಶಲಕಲೆಗಳು ವಿಶಿಷ್ಟವಾದ ಸ್ಥಾನಮಾನವನ್ನು ಪಡೆದುಕೊಂಡಿವೆ. ಈ ಕಲೆಗಳು ನಿಮ್ಮ ಜೀವನಕ್ಕೆ ಸಹಾಯಕವಾಗಿವೆ. ಮುಂದೆ ನೀವು ಉದ್ಯೋಗಕ್ಕೆ ಸೇರುವಾಗ ನಿಮ್ಮ ಪಠ್ಯವಿಷಯವು ಮಾತ್ರ ಕಾರಣವಾಗದೇ ನಿಮ್ಮ ಕೈಚಳಕ, ಆಸಕ್ತಿಗಳೂ ಕಾರಣವಾಗುತ್ತವೆ. ಈ ಕರಕುಶಲತೆಗಳು ಜೀವನಕ್ಕೆ ಬೆಳಕಾಗುತ್ತವೆ ಎಂದು ಭಾರತ ಸರಕಾರದ ಜವಳಿ ಸಚಿವಾಲಯದ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ ಎಮ್ ಹೇಳಿದರು. ಅವರು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಂಗಳವಾರ ಜ್ಞಾನನಿಕೇತನ ಸಭಾಂಗಣದಲ್ಲಿ ನಡೆದ ಕರಕುಶಲಕಲೆಗಳ ಪ್ರಾತ್ಯಕ್ಷತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಜನಾರ್ದನ ರಾವ್ ಹಾವಂಜೆ ಮಾತನಾಡಿ, ಕೊಂಕಣ ಕರಾವಳಿ ಭಾಗದ ಪುರಾತನ ಕಲೆ ಕಾವಿಕಲೆ. 13ನೇ ಶತಮಾನದಿಂದಲೂ ಈ ಕಲೆ ಬಹಳವಾಗಿ ಬಳಕೆಯಾಗುತ್ತಿದ್ದು, ಸುಣ್ಣದ ಗಾರೆಯನ್ನು ನಡೆಸಿದ ಕಟ್ಟಡಗಳಲ್ಲಿ ಇದನ್ನು ನಡೆಸುತ್ತಿದ್ದರು. ಮನೆ ಮತ್ತು ದೇವಾಲಯಗಳ ನಿರ್ಮಾಣದಲ್ಲಿ ಸುಣ್ಣದ ಬಳಕೆ ಸಾಮಾನ್ಯವಾಗಿರುತ್ತಿತ್ತು. ಕಲೆಯನ್ನು ಅರಿತು ಬೆಳೆಯುವುದರಿಂದ ನಿಮ್ಮ ಜೀವನ ಸಮಾಜಮುಖಿಯಾಗಿ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಶಾಲಾ ಪ್ರಾಂಶುಪಾಲ ಶರಣ ಕುಮಾರ್ ಮಾತನಾಡಿ, ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಳ್ಳಬೇಕಾದರೆ ಕಲೆ ಬೇಕು. ನಮ್ಮ ಜೀವನದ ಕೊಳೆಯನ್ನು ತೆಗೆಯಲು ಕಲೆ ಬೇಕು. ಪದ-ವಾಕ್ಯಗಳಿಲ್ಲದೇ ಕಥೆಗಳನ್ನು, ವಿಚಾರವನ್ನು ಬೋಧಿಸುವ ಸಾಮರ್ಥ್ಯ ಕಲೆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾಪಾಠ್ಯಕ್ರಮದ ಜೊತೆ ಜೊತೆಯಲ್ಲಿ ಕರಕುಶಲಕಲೆಗಳ ಅಧ್ಯಯನವನ್ನು ನಡೆಸಬೇಕು ಎಂದರು.
ನಂತರ ಮಣ್ಣಿನ ಸಾಮಗ್ರಿಗಳ ರಚನೆ, ಆಭರಣ ತಯಾರಿಕೆ, ತೆಂಗಿನಚಿಪ್ಪಿನ ಕಲಾಕೃತಿ ಮತ್ತು ಕಾವಿಕಲೆಯ ಸಂರಚನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ರಘುರಾಮ ಕುಲಾಲ, ಆಲೂರು, ಪರಿಮಳ, ರೂಪಾ ರಾವ್ ಮತ್ತು ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಮರ್ಥ ಪೂಜಾರಿ ನಿರೂಪಿಸಿದರು. ವಿದ್ಯಾರ್ಥಿನಿ ಸಾನ್ವಿ ಕೆ ಎಸ್ ಸ್ವಾಗತಿಸಿ, ವಿದ್ಯಾರ್ಥಿನಿ ಸಮೃದ್ಧಿ ವಂದಿಸಿದರು.
