ಕುಂದಾಪುರ: ಉತ್ತಮ ಶಿಕ್ಷಕ ನಿವೃತ್ತಿಯಾಗುವುದಿಲ್ಲ – ರತ್ನಾಕರ ಶೆಟ್ಟಿ ಎಂ.ವಿ
ನಿವೃತ್ತ ಶಿಕ್ಷಕ ರತ್ನಾಕರ ಶೆಟ್ಟಿ ಎಂ.ವಿ. ಅವರಿಗೆ ಬೀಳ್ಕೊಡುಗೆ ಸನ್ಮಾನ






ಕುಂದಾಪುರ: ಒಬ್ಬ ಉತ್ತಮ ಶಿಕ್ಷಕ ಎನ್ನಿಸಿಕೊಂಡ ಶಿಕ್ಷಕ ಯಾವತ್ತೂ ನಿವೃತ್ತಿಯನ್ನು ಬಯಸುವುದಿಲ್ಲ. ತನ್ನ ನಿವೃತ್ತಿಯ ನಂತರವೂ ಶಿಕ್ಷಕ ಸಂಸ್ಥೆಗಳ ಒಡನಾಟದೊಂದಿಗೆ ಶಾಲೆಯ ಅಭಿವೃದ್ಧಿಗೆ ಸದಾ ದುಡಿಯಲು ಇಚ್ಚಿಸುತ್ತಾನೆ. ಉತ್ತಮ ಶಿಕ್ಷಕ ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಸರ್ವೋತ್ತರ ಯಶಸ್ಸಿಗೆ ತುಡಿಯುತ್ತಾನೆ. ನನ್ನಂತಹಾ ಶಿಕ್ಷಕನನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಚಿರಋಣಿಯಾಗಿರುತ್ತೇನೆ ಎಂದು ಕಳೆದ ಮೂವತ್ತೆರಡು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಮಾವಿನಕಟ್ಟೆ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ರತ್ನಾಕರ ಶೆಟ್ಟಿ ಎಂ.ವಿ. ಹೇಳಿದರು.



ಅವರು ಆಗಸ್ಟ್ 15ರಂದು ಮಾವಿನಕಟ್ಟೆ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಸ್ವಾತಂತ್ರ್ಯ ದಿನಾಚರಣೆಯ ಬಳಿಕ ನಡೆದ ರತ್ನಾಕರ ಶೆಟ್ಟಿ ಹಾಗೂ ಪತ್ನಿ ಮಮತಾ ಆರ್ ಶೆಟ್ಟಿ ದಂಪತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.



ಇದೇ ಸಂದರ್ಭ ರತ್ನಾಕರ ಶೆಟ್ಟಿಯವರ ಪುತ್ರಿ ಸಚಿತಾ ಅವರು, ತಮ್ಮ ತಂದೆಯ ಆದರ್ಶ ವ್ಯಕ್ತಿತ್ವವನ್ನು ಕೊಂಡಾಡಿದರು. ಬಳಿಕ ಶಾಲೆಗೆ ಒಂದು ಪ್ರಿಂಟರನ್ನು ಉಚಿತವಾಗಿ ನೀಡಿದರು. ಶಾಲೆಗೆ ಲ್ಯಾಪ್ ಟಾಪ್ ಉಚಿತವಾಗಿ ನೀಡಿದ ಕರ್ಕುಂಜೆ ವ್ಯ.ಸೇ.ಸ.ಸಂಘ ಇದರ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.








ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉದಯ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಗುಲ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್, ಉದ್ಯಮಿ ಚೆರಿಯಬ್ಬ ಸಾಹೇಬ್ , ಮಾವಿನಕಟ್ಟೆ, ಉದ್ಯಮಿ ಮುನಾಫ್ ಮಾವಿನಕಟ್ಟೆ, ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಕೀಲ ಶರತ್ ಕುಮಾರ್ ಶೆಟ್ಟಿ, ಉದ್ಯಮಿ ಖಾದಿ ಸಾಹೇಬ್ ಬಿಜೂರ್, ಪ್ರಗತಿಪರ ಕೃಷಿಕ, ನಾನಾ ಪ್ರೊಡಕ್ಟ್ಸ್ ಮಾಲಕ ಕೆಂಚನೂರು ಸೋಮಶೇಖರ್ ಶೆಟ್ಟಿ, ಪ್ರಭಾರ ಮುಖ್ಯೋಪಾದ್ಯಾಯ ಸುರೇಂದ್ರ ಶೆಟ್ಟಿ, ವಿದ್ಯಾರ್ಥಿ ನಾಯಕ ಸಾಗರ್, ಶಶಿಧರ ಶೆಟ್ಟಿ ವಂಡ್ಸೆ, ಉದ್ಯಮಿ ಹಾಗೂ ಗುತ್ತಿಗೆದಾರ ದಿವ್ಯಾನಂದ ಶೆಟ್ಟಿ ದಾಸರಬೆಟ್ಟು ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.
