ಖಾಸಗೀ ಪಿಯು ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ – ಕಾರಣ ಇನ್ನೂ ನಿಗೂಢ
ಕುಂದಾಪುರ: ಇಲ್ಲಿಗೆ ಸಮೀಪದ ಖಾಸಗೀ ಪಿಯು ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಕೊಲ್ಲೂರಿನ ಅರುಣ್ ಎಂಬುವರ ಪುತ್ರಿ, ವಿದ್ಯಾರ್ಥಿನಿ ಅನನ್ಯ (17) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡವಳು.

ಅನನ್ಯಾ ಕಳೆದ ಒಂದು ತಿಂಗಳಿನಿಂದ ಕಾಲೇಜಿಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದಳು. ಆದರೆ ಮನೆಯವರು ಆಕೆಯ ಮನವೊಲಿಸಲು ಯತ್ನಿಸಿದ್ದರು. ಬಳಿಕ ಅನನ್ಯಾ ಹೆದರಿಕೊಂಡು ಅಸ್ತಮಾ ಸಮಸ್ಯೆ ಇರುವಂತೆ ಮಾಡುತ್ತಿದ್ದಳೆನ್ನಲಾಗಿದ್ದು, ಮನೆಯವರು ಸ್ಥಳೀಯ ವೈದ್ಯರಲ್ಲಿ ಹಾಗೂ ಕುಂದಾಪುರದ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬುಧವಾರ ಬೆಳಿಗ್ಗೆ ಸುಮಾರು ಹತ್ತು ಗಂಟೆಗೆ ಅನನ್ಯಾ ಮನೆಯ ರೂಮ್ ನ ಚಿಲಕ ಹಾಕಿಕೊಂಡಿದ್ದು, ಮನೆಯಲ್ಲಿದ್ದ ತಾಯಿ ಹಾಗೂ ಇತರರು ಚಿಲಕ ಒಡೆದು ಒಳಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆದರೆ ಅನನ್ಯಾ ಇಷ್ಟಪಟ್ಟು ಸೇರಿದ್ದ ಕಾಲೇಜಿಗೆ ಹೋಗಲು ಯಾಕೆ ನಿರಾಕರಿಸಿದ್ದಾಳೆ? ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನು? ಎನ್ನುವುದು ಮಾತ್ರ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
