ಕುಂದಾಪುರ: ಸಂಚಾರಿ ಪೊಲೀಸ್ ಠಾಣೆಗಿಲ್ಲ ಪೊಲೀಸ್ ಜೀಪ್ – ಬೈಕಿನಲ್ಲೇ ಓಡಾಡಬೇಕು ಪಿಎಸೈ!
ವಿಶೇಷ ವರದಿ

ಕುಂದಾಪುರ: ಕಳ್ಳರನ್ನು ಹಿಡಿಯಲೆಂದು ನೇಮಕಗೊಳ್ಳುವ ಪೊಲೀಸರಿಗಿಲ್ಲ ಓಡಾಡಲೊಂದು ಜೀಪು! ತಿಂಗಳಿಗಿಷ್ಟು ಕೇಸು ಕೊಡಿ ಎನ್ನುವ ಪೊಲೀಸ್ ಇಲಾಖೆಯಲ್ಲಿ ವಾಹನಗಳಿಗೇ ಬರ. ಇದು ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಮಂದಗತಿಯ ಆಡಳಿತಕ್ಕೆ ಹಿಡಿದ ಕೈಗನ್ನಡಿ.!?
ಹೌದು. ಕಳೆದ ಒಂದು ತಿಂಗಳಿನಿಂದ ಕುಂದಾಪುರದ ಸಂಚಾರಿ ಪೊಲೀಸ್ ಠಾಣೆಗೆ ಓಡಾಡಲೊಂದು ಜೀಪ್ ಇಲ್ಲ. ಸದ್ಯ ಸಂಚಾರಿ ಪಿಸೈ ತನ್ನ ಬೈಕಿನಲ್ಲಿಯೇ ವಾಹನಗಳನ್ನು ಛೇಸ್ ಮಾಡಬೇಕಾದ ದುರ್ಗತಿ ಬಂದಿದೆ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಇದ್ದ ಪೊಲೀಸ್ ಜೀಪ್ ಗೆ ಹದಿನೈದು ವರ್ಷಗಳು ಕಳೆದಿದೆ ಎಂಬ ಕಾರಣಕ್ಕೆ ಸರ್ಕಾರ ವಾಪಾಸು ಪಡೆದುಕೊಂಡಿದೆ. ಆದರೆ ನಿಯಮದಂತೆ ಹೊಸ ವಾಹನವನ್ನು ಸರ್ಕಾರ ಕೊಡಬೇಕು. ಆದರೆ ವಾಪಾಸು ಪಡೆದುಕೊಂಡ ವಾಹನದ ಬದಲಿಗೆ ಇನ್ನೂ ಹೊಸ ವಾಹನ ನೀಡಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರು, ಉಡುಪಿ ಜಿಲ್ಲೆಯಲ್ಲಿ 20 ವಾಹನಗಳು ಖಂಡಂ ಆಗಿದ್ದು ಸರ್ಕಾರಕ್ಕೆ ವಾಪಾಸ್ಸು ಮಾಡಲಾಗಿದ್ದು, ಈ ಪೈಕಿ 4 ವಾಹನಗಳನ್ನು ಸರ್ಕಾರ ಮಂಜೂರು ಮಾಡಿದೆ. ಇನ್ನೂ ಹದಿನೈದರಿಂದ ಹದಿನಾರು ವಾಹನಗಳ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರ ಹೊಸ ವಾಹನಗಳು ಬರಲಿವೆ ಎಂದಿದ್ದಾರೆ.

ಅದೇನೇ ಇರಲಿ ಪೊಲೀಸರಿಗೆ ಟಾರ್ಗೆಟ್ ನೀಡುವ ಸರ್ಕಾರ ಟಾರ್ಗೆಟ್ ಪೂರೈಸಲು ಅನುಕೂಲವಾಗುವ ವಾಹನಗಳನ್ನು ಒದಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನಾದರೂ ಎಚ್ಚೆತ್ತುಕೊಂಡು ಕೊರತೆ ಇರುವ ಠಾಣೆಗಳಿಗೆ ತಕ್ಷಣ ವಾಹನ ಮಂಜೂರಾತಿ ಮಾಡುತ್ತದೆಯೇ ಕಾದು ನೋಡಬೇಕಿದೆ.
ಜಯಶೇಖರ್ ಮಡಪ್ಪಾಡಿ, ವಾಸ್ತವ.ಕಾಮ್