ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ – ಸ್ಕೂಟರ್ ಸವಾರಗೆ ಗಾಯ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಂಗಳೂರು ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಮೀನು ವ್ಯಾಪಾರದ ಸ್ಕೂಟರ್ ನಲ್ಲಿದ್ದ ಸವಾರ ಗಾಯಗಳೊಂದಿಗೆ ಪಾರಾಗಿದ್ದಾರೆ. ಸಾಸ್ತಾನ ಮೂಲದವರೆನ್ನಲಾದ ಕಾರಿನಲ್ಲಿದ್ದ ಅಪ್ರಾಪ್ತ ಯುವಕರಂತೆ ಕಾಣುತ್ತಿದ್ದ ಐದು ಜನ ಯುವಕರ ಪೈಕಿ ನಾಲ್ಕು ಜನ ಕಾರಿನಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಒಬ್ಬ ಕಾರಿನೊಳಗೆ ಸಿಲುಕಿದ್ದ ಪರಿಣಾಮ ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಗಾಯಗೊಂಡ ಸ್ಕೂಟರ್ ಸವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರ ಸಮೀಪದ ದುರ್ಗಾಂಬಾ ಬಸ್ ಡಿಪೋ ಎದುರುಗಡೆ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ಮೀನು ವ್ಯಾಪಾರಿಯೆನ್ನಲಾದ ಸ್ಕೂಟರ್ ಸವಾರ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದರು. ಇದೇ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಕಾರ್ ಬ್ಯಾರೀಕೇಡ್ ಮಧ್ಯದಲ್ಲಿ ನುಗ್ಗಿದಾಗ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಅಪಘಾತದ ತೀವ್ರತೆಗೆ ಕಾರು ನಾಲ್ಕು ಸುತ್ತು ಪಲ್ಟಿಯಾಗಿ ಮೇಲ್ಮುಖವಾಗಿ ಡಿವೈಡರ್ಗೆ ತಾಗಿ ಬಿದ್ದಿದೆ. ಸ್ಕೂಟರ್ ಮುಂಭಾಗ ನುಜ್ಜುಗುಜ್ಜಾಗಿದೆ.

ಅಪಘಾತಕ್ಕೆ ಅವೈಜ್ಞಾನಿಕ ಡಿವೈಡರ್ ಹಾಗೂ ಬ್ಯಾರಿಕೇಡ್ ಗಳೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಾಸ್ತಾನದಲ್ಲಿ ಕಾರನ್ನು ಬಾಡಿಗೆ ಕೊಡುತ್ತಿದ್ದವರ ಕೈಯಿಂದ ಈ ಯುವಕರು ಕಾರನ್ನು ಬಾಡಿಗೆ ಪಡೆದು ಜಾಲಿ ರೈಡ್ ಮಾಡುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.