ವಿದ್ಯಾರಣ್ಯ: ಬೋಧಕರು ಹೊಸತನಕ್ಕೆ ಮುಕ್ತವಾಗಿರಬೇಕು – ಸುಜ್ಞಾನ ಕಾಲೇಜಿನಲ್ಲಿ ಕನ್ನಡ ಕಾರ್ಯಾಗಾರ ಉದ್ಘಾಟಿಸಿದ ಪ.ಪೂ. ಉಪನಿರ್ದೇಶಕ ಮಾರುತಿ ಅಭಿಮತ
ಕುಂದಾಪುರ: ಮಕ್ಕಳ ಭವಿಷ್ಯ ಕಟ್ಟುವ ಮಹತ್ವದ ಜವಾಬ್ದಾರಿ ಹೊಂದಿರುವ ಉಪನ್ಯಾಸಕರು ಸದಾ ಹೊಸತನಕ್ಕೆ ತೆರೆದುಕೊಂಡಿರಬೇಕು. ಆಗ ಮಾತ್ರ ವಿದ್ಯಾರ್ಥಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಬಗ್ಗೆ ಯಾವುದೇ ಕಾರಣಕ್ಕೂ ನಿಲಕ್ಷ್ಯ ಧೋರಣೆ ಸಲ್ಲದು. ಇಂತಹ ಕಾರ್ಯಾಗಾರಗಳು ಬೋಧನಾ ವೃತ್ತಿಯಲ್ಲಿರುವವರಿಗೆ ಹೊಸ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತವೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಹೇಳಿದ್ದಾರೆ. ಅವರು ಗುರುವಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ ಮತ್ತು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇವರ ಆಶ್ರಯದಲ್ಲಿ ಒಂದು ದಿನದ ಕನ್ನಡ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬದುಕಿನಲ್ಲಿ ಸವಾಲುಗಳು ಸಾಧನೆಯ ಶಿಖರವೇರಲು ಸಹಾಯ ಮಾಡುತ್ತವೆ. ಗುರು ಸ್ಥಾನದಲ್ಲಿರುವವರು ವಿದ್ಯಾರ್ಥಿಗಳ ಶಕ್ತಿಯನ್ನು ಜೊತೆಗೆ ಅವರಿಗೆ ಬದುಕಿನ ಗುರಿಯ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ತಾಯ್ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರ ಪಾತ್ರವೂ ಮಹತ್ವವಾಗಿದ್ದು, ಇದಕ್ಕಾಗಿ ದೃಢ ಸಂಕಲ್ಪ ಮಾಡಬೇಕು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನ್ನಾಡಿಯ ಫೇವರೇಟ್ ಕ್ಯಾಶ್ಯೂ ಇಂಡಸ್ಟೀಸ್ ನ ಹೊಳ್ಮಗೆ ಶಂಕರ ಹೆಗ್ಡೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಈ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಕೈ ಬೆರೆಳಿನಲ್ಲಿಯೇ ಜಗತ್ತು ತೆರೆದುಕೊಳ್ಳುತ್ತಿರುವಾಗ ಉಪನ್ಯಾಸಕರು ಹಿಂದೆ ಉಳಿಯಬಾರದು; ಅವರ ವೇಗದ ಜೊತೆಗೆ ಸಾಗಲು ಒತ್ತು ನೀಡಬೇಕು ಎಂದರು. ಇದೇ ಸಂದರ್ಭ 2024-2025ನೇ ಸಾಲಿನ ಮಾರ್ಚ್ ತಿಂಗಳ ಪದವಿಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಆಸ್ತಿ ಎಸ್. ಶೆಟ್ಟಿ, ಸಾನಿಕಾ ಹಾಗೂ ಅಂಕಿತಾ ಶ್ಯಾನುಭೋಗ ಅವರನ್ನು ಸನ್ಮಾನಿಸಲಾಯಿತು. ಹಿರಿಯಡ್ಕದ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಎ.ವಿ.ಭಟ್ ಅವರನ್ನು ಗೌರವಿಸಲಾಯಿತು.

ಸುಜ್ಞಾನ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಅನಿತಾ ನರೇಂದ್ರ ಕುಮಾರ್ ನಿರೂಪಿಸಿದರು, ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಪ.ಪೂ. ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಕಾಳಾವರ ಸ್ವಾಗತಿಸಿ ಪ್ರಾಸ್ತಾವಿಸಿದರು. ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ ಶುಭ ಹಾರೈಸಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಉಪನ್ಯಾಸಕ ಸುಜಯಿಂದ್ರ ಹಂದೆ ವಂದಿಸಿದರು. ಸುಜ್ಞಾನ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸರಕಾರಿ ಪ.ಪೂ. ಕಾಲೇಜು ಕರ್ಜೆಯ ಪ್ರಾಂಶುಪಾಲರು ಹಾಗೂ ಕನ್ನಡ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ, ತೆಂಕನಿಡಿಯೂರು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ, ಕನ್ನಡ ಉಪನ್ಯಾಸಕರ ಸಂಘದ ಗೌರವ ಸಲಹೆಗಾರ ವಿಶ್ವನಾಥ ಕರಬ ಉಪಸ್ಥಿತರಿದ್ದರು. ಡಾ.ಜಯಪ್ರಕಾಶ ಶೆಟ್ಟಿ, ಡಾ.ರವಿರಾಜ ಶೆಟ್ಟಿ ಮತ್ತು ಸದಾಶಿವ ಹೊಳ್ಳ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು.