ಭಟ್ಕಳದಲ್ಲಿ ದೋಣಿ ಮುಳುಗಡೆ: ಇಬ್ಬರ ರಕ್ಷಣೆ – ನಾಲ್ವರು ಇನ್ನೂ ನಾಪತ್ತೆ
ಭಟ್ಕಳ: ಭಟ್ಕಳದ ಅಳ್ವೆಕೋಡಿ ಬಂದರಿನಿಂದ ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ತೆರಳಿದ ಮಹಾಸತಿ ಗಿಲ್ನೆಟ್ ದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ದುರ್ಘಟನೆಯಲ್ಲಿ ದೋಣಿಯಲ್ಲಿದ್ದ ಆರು ಜನ ಮೀನುಗಾರರ ಪೈಕಿ ದೋಣಿ ಮಾಲೀಕ ಮನೋಹರ ಮೊಗೇರ ಮತ್ತು ಬೆಳ್ನಿಯ ಮೂಲದ ರಾಮ ಖಾರ್ವಿ ಎಂಬ ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇವರನ್ನು ಕರಾವಳಿ ಭದ್ರತಾ ಪಡೆ ಪಿಎಸ್ಐ ವೀಣಾ ಚಿತ್ರಪುರ ನೇತೃತ್ವದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.




ಇನ್ನುಳಿದಂತೆ ದೋಣಿಯಲ್ಲಿದ್ದ ಜಾಲಿ ಕೊಡಿ ರಾಮಕೃಷ್ಣ ಮಂಜು ಮೊಗೇರ( 40) , ಅಳ್ವೆಕೋಡಿಯ ಸತೀಶ್ ತಿಮ್ಮಪ್ಪ ಮೊಗೇರ (26), ಅಳ್ವೇಕೋಡಿ ಗಣೇಶ್ ಮಂಜುನಾಥ ಮೊಗೇರ (27) ಮುಗ್ರಿ ಮನೆಯ ಕನ್ನಡ ಶಾಲೆಯ ನಿಶ್ಚಿತ ಮೊಗೇರ (30) ಎಂಬ ನಾಲ್ಕು ಜನ ನಾಪತ್ತೆಯಾಗಿದ್ದಾರೆ.


ಬುಧವಾರ ಮಧ್ಯಾಹ್ನದಿಂದಲೇ ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ಕರಾವಳಿ ಭದ್ರತಾ ಪಡೆ ಮತ್ತು ಸ್ಥಳೀಯ ಅಧಿಕಾರಿಗಳು, ಮುಳುಗು ತಜ್ಞರು ಹುಡುಕಾಟ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಹಾಜರಿದ್ದಾರೆ. ಪಾತಿ ದೋಣಿ ಹಾಗೂ ಗಿಲ್ನೆಟ್ ದೋಣಿ ಮೀನುಗಾರರು ಮುಂಡಳ್ಳಿ ಹಾಗೂ ತೆಂಗಿನಗುಂಡಿ ಪ್ರದೇಶದಲ್ಲಿ ನಾಪತ್ತೆಯಾದವರಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಸಮುದ್ರದಲ್ಲಿ ಕೊಚ್ಚಿ ಹೋದವರು ಮೃತಪಟ್ಟರೆ ಅವರ 24ರಿಂದ 48 ಗಂಟೆಗಳ ಒಳಗೆ ದಡಕ್ಕೆ ಬೀಳುತ್ತದೆ ಎನ್ನಲಾಗುತ್ತಿದೆ.