ಸೌಜನ್ಯ ಪ್ರಕರಣ ಎಸ್ ಐ ಟಿ ಗೆ ವಹಿಸುವಂತೆ ಜನವಾದಿ ಮಹಿಳಾ ಸಂಘಟನೆಯ 2ನೇ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹ
ಕುಂದಾಪುರ: ಮಹಿಳೆಯರ ಸುರಕ್ಷತೆ ಆಳುವ ಸರ್ಕಾರಗಳಿಗೆ ಆದ್ಯತೆಯಾಗುತ್ತಿಲ್ಲ.ಮಹಿಳೆಯರ ಕುರಿತಾದ ಜನಪ್ರತಿನಿಧಿಗಳ ಮನೋಭಾವ ಬದಲಾಗಬೇಕು. ಅಸಹಜ ಸಾವುಗಳ ಪ್ರಕರಣಗಳ ಕುರಿತಾದ ಎಸ್ ಐ ಟಿ ತನಿಖೆಯ ವ್ಯಾಪ್ತಿಗೆ ಸೌಜನ್ಯ ಪ್ರಕರಣವನ್ನು ತರಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಒತ್ತಾಯಿಸಿದ್ದಾರೆ. ಸೋಮವಾರ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷಣೆಯಡಿಯಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಸಮಿತಿ ದ್ವಿತೀಯ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಮಹಿಳೆಯರ ಘನತೆಯ ಮೇಲೆ ಹೇಗೆಲ್ಲಾ ದಾಳಿಗಳನ್ನು ತೀವ್ರಗೊಳಿಸಿದೆ ಎನ್ನುವುದನ್ನು ನಾವೆಲ್ಲರೂ ಮನಗಾಣಬೇಕಿದೆ. ಅಸಮಾನತೆ ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಹಿಳಾ ಸಮಾನತೆಗಾಗಿ ಹೋರಾಟವನ್ನು ಬಲಗೊಳಿಸುವ ಜವಾಬ್ದಾರಿಯನ್ನು ಎಲ್ಲರು ನಿರ್ವಹಿಸಬೇಕಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ದುಡಿಯುವ ಜನರ ಚಳುವಳಿಗಳನ್ನು ತೀವ್ರಗೊಳಿಸಿದಾಗ ಮಹಿಳೆಯರು ಆರ್ಥಿಕ ಸಶಕ್ತತೆ ಸಾಧ್ಯ. ಇಂದಿನ ಪ್ರಸಕ್ತ ಸವಾಲುಗಳನ್ನು ಎದುರಿಸಲು ಮಹಿಳಾ ಚಳುವಳಿಯನ್ನು ಬಲಪಡಿಸಿದರೆ ಮಹಿಳೆಯರಿಗೆ ನ್ಯಾಯ ಸಿಗಲು ಸಾಧ್ಯ. ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದರು.

ಜಿಲ್ಲೆಯ ವಿವಿಧ ವಲಯಗಳಿಂದ ಮಹಿಳಾ ಪ್ರತಿನಿಧಿಗಳು ಭಾಗವಹಿಸಿ ಜಿಲ್ಲೆಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಸೌಜನ್ಯ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ 23 ಸದಸ್ಯರ ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಸರೋಜಾ ಪುನರಾಯ್ಕೆಗೊಂಡರು. ಕಾರ್ಯದರ್ಶಿಯಾಗಿ ಶೀಲಾವತಿ, ಖಜಾಂಚಿಯಾಗಿ ಲಲಿತಾ ಆಯ್ಕೆಯಾದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ಸರೋಜಾ ಅವರು ಪ್ರಜಾಪ್ರಭುತ್ವ, ಸಮಾನತೆ, ಮಹಿಳಾ ವಿಮೋಚನೆಯ ಗುರಿಗಳನ್ನು ಹೊಂದಿರುವ ಜನವಾದಿ ಮಹಿಳಾ ಸಂಘಟನೆಯ ಧ್ವಜಾರೋಹಣವನ್ನು ನೆರವೇರಿಸಿದರು. ಕಟ್ಟಡ ನಿರ್ಮಾಣ ಕಾರ್ಮಿಕರ ಮುಖಂಡರಾದ ಚಂದ್ರಶೇಖರ್ ರವರು ಉಪಸ್ಥಿತರಿದ್ದರು. ನಿರೂಪಣೆಯನ್ನು ಜಿಲ್ಲಾ ಕಾರ್ಯದರ್ಶಿ ಶೀಲಾವತಿ ನಿರೂಪಿಸಿದರು. ಸುಮನಾ ನಾಡಾ ವಂದಿಸಿದರು ಸುಶೀಲಾ ಉಪ್ಪುಂದ ಸ್ವಾಗತಿಸಿದರು.
