ನೈಜ ಪತ್ರಕರ್ತರೇ ಸಮಾಜದ ಬೆನ್ನೆಲುಬು – ಉಡುಪಿ ಎಸ್ಪಿ ಹರಿರಾಂ ಶಂಕರ್ ಅಭಿಮತ
*ಕುಂದಾಪುರದಲ್ಲಿ ಕಾರ್ಯನಿರತ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ಸನ್ಮಾನ*

ಕುಂದಾಪುರ: ಸಮಾಜದ ಎಲ್ಲಾ ಸ್ಥರಗಳ ನಂಬಿಕೆಗೆ ಅರ್ಹರಾದವರೇ ಪತ್ರಕರ್ತರು. ಸಾಂವಿಧಾನಿಕ ಚೌಕಟ್ಟಿನಲ್ಲಿ ಸಮಾಜ ಮುನ್ನಡೆಯಬೇಕಾದರೆ ಪ್ರತೀ ಪತ್ರಕರ್ತನೂ ನೈಜತೆಯಿಂದ, ನಿಷ್ಠುರನಾಗಿರಬೇಕು. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಸಮಾಜದ ಪತ್ರಕರ್ತರೇ ಮಾದರಿಯಾಗುತ್ತಾರೆ. ಆ ನಿಟ್ಟಿನಲ್ಲಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರೇ ಮುನ್ನುಡಿ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಂ ಶಂಕರ್ ಹೇಳಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಅಧೀಕೃತ ಸದಸ್ಯರ ಡೈರಕ್ಟರಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾ ಕ್ಷೇತ್ರದಲ್ಲಿ ಅತೀ ದೊಡ್ಡ ಹೆಸರು ಮಾಡಿದ ವಡ್ಡರ್ಸೆ ರಘುರಾಮ ಶೆಟ್ಟರ ಊರಿದು. ಅವರ ಪುತ್ರ ಮಧುಕರ ಶೆಟ್ಟಿ ಎಲ್ಲಾ ಐಪಿಎಸ್ ಅಧಿಕಾರಿಗಳಿಗೂ ಮಾದರಿ. ಸಮಾಜದ ಮೇಲೆ ಪತ್ರಕರ್ತರ ದೃಷ್ಟಿಕೋನ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ಧಾರಿ ಪತ್ರಕರ್ತರದ್ದಾಗಿದೆ ಎಂದು ಅವರು ಹೇಳಿದರು. ಪೊಲಿಸ್ ಇಲಾಖೆ ಹಾಗೂ ಪತ್ರಕರ್ತರು ಸಮಾಜದ ಎರಡು ಕಣ್ಣುಗಳು ಎಂದರು.

ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಅಧೀಕೃತ ಸದಸ್ಯರ ಡೈರಕ್ಟರಿಯನ್ನು ಕೋಟದ ಗೀತಾನಂದ ಫೌಂಡೆಷನ್ನ ಪ್ರವರ್ತಕ ಆನಂದ ಸಿ ಕುಂದರ್ ಬಿಡುಗಡೆಗೊಳಿಸಿದರು.



ಇದೇ ಸಂದರ್ಭ ಸಾಧಕ ಪತ್ರಕರ್ತರಾದ ಯು.ಎಸ್.ಶೆಣೈ ಮತ್ತು ಡಾ.ಉದಯ ಕುಮಾರ್ ತಲ್ಲೂರು ಇವರಿಗೆ ಪತ್ರಿಕೋದ್ಯಮದ ಗೌರವಾರ್ಪಣೆ ಸಲ್ಲಿಸಲಾಯಿತು.


ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ ಪತ್ರಿಕಾ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿ, ಲೇಖನಿ ಖಡ್ಗಕ್ಕಿಂತ ಹರಿತಬಲ ಎನ್ನುವ ಮಾತಿದೆ. ಅದಕ್ಕಾಗಿಯೇ ಸಮಾಜದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಗೌರವವಿದೆ. ಆದರೆ ಉದ್ಯಮದ ನಿಟ್ಟಿನಲ್ಲಿ ಪತ್ರಿಕೆಗಳು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಮೌಲ್ಯಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜದ ಮೇಲಿನ ಜವಾಬ್ದಾರಿ, ಹೊಣೆಗಾರಿಕೆ ಪತ್ರಕರ್ತರಿಗೆ ಹೆಚ್ಚಿದೆ. ಅಂಕಗಳಿಕೆಯ ಶಿಕ್ಷಣದೊಂದಿಗೆ ಮೌಲ್ಯಯುತ ಸಮಾಜದ ಜೊತಗೆ ಮಾನಿವೀಯ ಸಂಬಂಧಗಳನ್ನು ಬೆಸೆಯುವ ಸಂಸ್ಕಾರ ರೂಪಿಸಿಕೊಳ್ಳಬೇಕು ಎಂದರು.

ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಅಚಾರ್ಯ, ಡಾ.ಜಿ.ಎಮ್.ಗೊಂಡ, ರಾಜೇಶ ಕೆ.ಸಿ, ಶುಭ ಹಾರೈಸಿದರು.




ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.










ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್ ಬೀಜಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ರಾಘವೇಂದ್ರ ಪೈ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.
