ಹಿರಿಯ ಶಾಸ್ತ್ರೀಯ ವಾದ್ಯ ವಿದ್ವಾಂಸ ಕಮಲಶಿಲೆ ಕೊರಗ ದೇವಾಡಿಗ ನಿಧನ
ಕುಂದಾಪುರ: ಜಿಲ್ಲೆಯ ಹಿರಿಯ ಶಾಸ್ತ್ರೀಯ ವಾದ್ಯಗಾರ ವಿದ್ವಾನ್ ಕಮಲಶಿಲೆ ಕೊರಗ ದೇವಾಡಿಗ ಅವರು ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ತಮ್ಮ ವಿದ್ವತ್ತಿನ ಮೂಲಕ ಅನೇಕ ಶಿಷ್ಯರ ಬಾಳಿಗೆ ಬೆಳಕಾಗಿದ್ದ ವಿದ್ವಾನ್ ಕೊರಗ ದೇವಾಡಿಗ ಅವರು ಆರನೇ ತರಗತಿಯವರೆಗೆ ಓದಿದ್ದರು. ಮೌರಿಕಾರ ಕೊಗ್ಗ ಎಂದೇ ಪ್ರಸಿದ್ದರಾಗಿದ್ದ ಕೊರಗ ದೇವಾಡಿಗರು, ಕರ್ನಾಟಕ ಶಾಸ್ತ್ರೀಯ ದ ಎಲ್ಲಾ ಪ್ರಕಾರದ ವಾದ್ಯ ಸಂಗೀತ ನುಡಿಸುತ್ತಿದ್ದರು. ಕಮಲಶಿಲೆ ಅಲ್ಲದೇ ಕುಂದಾಪುರ ತಾಲೂಕಿನಾದ್ಯಂತ ನೂರಕ್ಕೂ ಹೆಚ್ಚು ಶಿಷ್ಯ ವೃಂದವನ್ನು ಹೊಂದಿದ್ದಾರೆ.

50 ವರ್ಷ ಜಾಸ್ತಿ ಕಾಲ ಕಮಲಶಿಲೆ ದೇವಸ್ಥಾನದಲ್ಲಿ ವಾದ್ಯಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಕೊಲ್ಲೂರು ದೇವಸ್ಥಾನದಲ್ಲಿಯೂ ಸುಮಾರು 35 ವರ್ಷಗಳ ಕಾಲ ವಾದ್ಯಗಾರನಾಗಿ ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರು. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊರಗ ದೇವಾಡಿಗರನ್ನು ಸನ್ಮಾನಿಸಿದ್ದಲ್ಲದೇ ಸರ್ಕಾರದಿಂದ ಪ್ರಶಸ್ತಿ ನೀಡಿ ಗೌರವಿಸುವುದರ ಜೊತೆಗೆ ಸ್ಯಾಕ್ಸೋಫೋನ್ ಮತ್ತು ಕ್ಯಾರಿಯೋನೇಟನ್ನು ಉಡುಗೊರೆಯಾಗಿ ನೀಡಲಾಗಿತ್ತು. ಜೊತೆಗೆ ನೂರಾರು ಸಂಘ ಸಂಸ್ಥೆಗಳು ಶ್ರೀಯುತರನ್ನು ಗೌರವಿಸಿ ಸನ್ಮಾನಿಸಿದ್ದರು. ಇವರ ಪುತ್ರ ವಿಜಯ ದೇವಾಡಿಗರು ತಂದೆಯವರು ಹಾಕಿಕೊಟ್ಟ ವೃತ್ತಿಯಲ್ಲಿಯೇ ಮುಂದುವರೆಯುತ್ತಿದ್ದು, ನೂರಾರು ಕಡೆ ವಾದ್ಯಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ವಾನ ಕಮಲಶಿಲೆ ಕೊರಗ ದೇವಾಡಿಗರು ಪತ್ನಿ, 3 ಹೆಣ್ಣು 2 ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ, ಶಿಷ್ಯ ವೃಂದವನ್ನು ಅಗಲಿದ್ದಾರೆ. ಸೋಮವಾರ ಬೆಳಿಗ್ಗೆ ಕೊರಗ ದೇವಾಡಿಗರ ಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
