ರಾಜಕೀಯದಲ್ಲಿ ಅಡ್ಡ ದಾರಿ ಹಿಡಿದಿಲ್ಲ – ಅಭಿನಂದನಾ ಸಮಾರಂಭದಲ್ಲಿ ಬೀಜಾಡಿ ಅಶೋಕ್ ಪೂಜಾರಿ
ಕುಂದಾಪುರ: ರಾಜಕೀಯದಲ್ಲಿ ನಾನು ಯಾವತ್ತೂ ಅಡ್ಡದಾರಿ ಹಿಡಿದಿಲ್ಲ. ಪರಿಣಾಮವಾಗಿ ನಾನಿನ್ನೂ ಕಾರ್ಯಕರ್ತನಾಗಿಯೇ ಉಳಿದಿದ್ದೇನೆ. ರಾಜಕೀಯ ನಾಯಕನಾಗುವ ಅದೃಷ್ಟ ಇಲ್ಲವೋ ಏನೋ ಆದರೆ, ಸಮಾಜ ಸೇವೆಯಲ್ಲಿ ನಾನು ತೃಪ್ತಿ ಕಂಡಿದ್ದೇನೆ. ರಾಜಕೀಯ ಅರ್ಥವಾಗಬೇಕಾದರೆ ನಾನು ಐವತ್ತೈದು ವರ್ಷ ಕಳೆಯಬೇಕಾಯಿತು. ಇದೀಗ ಸಿಕ್ಕಿರುವ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನದ ಅವಕಾಶ ಹೂವಿನ ಹಾಸಿಗೆಯಲ್ಲ ಎಂಬುದು ಗೊತ್ತಿದೆ. ಸಾಧ್ಯವಾದಷ್ಟು ನನ್ನ ಜನರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ, ಬೀಜಾಡಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಅಶೋಕ ಪೂಜಾರಿ ಬೀಜಾಡಿ ಹೇಳಿದರು.



ಅವರು ಭಾನುವಾರ ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ, ಬೀಜಾಡಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.












ಅಭಿನಂದನಾ ಮಾತುಗಳನ್ನಾಡಿದ ಬೀಜಾಡಿ-ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಚಿಕ್ಕು ಅಮ್ಮ ಸಹಪರಿವಾರ ದೈವಸ್ಥಾನ ಆಡಳಿತ ಮೊಕ್ತೇಸರ ಆನಂದ ಬಿಳಿಯಾ ಅವರು, ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವಂತಹಾ ವ್ಯಕ್ತಿ ಬೀಜಾಡಿ ಅಶೋಕ್ ಪೂಜಾರಿ. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ ನಾಯಕನಾದವನು ನಿಷ್ಪಕ್ಷಪಾತನಾಗಿರಬೇಕು. ಬೀಜಾಡಿ ಅಶೋಕ ಪೂಜಾರಿ ಅಂತಹಾ ಸಾಲಿಗೆ ಸೇರಿದವರು. ಇವರ ಜೊತೆಗಿರುವ ಯುವ ಪಡೆ ಸಮಾಜದ ಅಭಿವೃದ್ಧಿಗಾಗಿ ಸದಾ ಬೆನ್ನಿಗೆ ನಿಲ್ಲುತ್ತಿದೆ. ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಭಿವೃದ್ಧಿ ಮುಮದಿನ ದಿನಗಳಲ್ಲಿ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.





ಕರ್ನಾಟಕ ರಾಜ್ಯ ಮಾಜಿ ಮೀನುಗಾರಿಕಾ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅಧಿಕಾರಕ್ಕೇರಿದಾಗ ಸ್ನೇಹಿತರು ಅಭಿನಂದಿಸುತ್ತಾರೆ. ಆದರೆ ಅಧಿಕಾರದ ಅವಧಿ ಮುಗಿದು ಹೊರಬರುವಾಗ ಇಡೀ ಊರೇ ಅಭಿನಂದಿಸುವ, ಸನ್ಮಾನಿಸುವ ಕೆಲಸವಾಗಬೇಕು. ಅಂತಹಾ ಸನ್ಮಾನವನ್ನು ಬೀಜಾಡಿ ಅಶೋಕ್ ಪೂಜಾರಿ ಪಡೆಯುತ್ತಾರೆ ಎಂದರು.




ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಕೊಡುಗೆ ನೀಡುತ್ತಾ, ಜಾತಿ ಮತ ಪಕ್ಷ ಬೇಧ ಮರೆತು ಕೆಲಸ ನಿರ್ವಹಿಸುತ್ತಿರುವ ಅಶೋಕ್ ಪೂಜಾರಿ ತಮ್ಮ ಅಧಿಕಾರಾವಧಿಯಲ್ಲಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.



ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಮೀನುಗಾರರಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ ಮುಖ್ಯ ಕಾರಣಕರ್ತರಾದವರು ಕೆ. ಜಯಪ್ರಕಾಶ್ ಹೆಗ್ಡೆ. ಅವರ ಸ್ನೇಹ ಇರುವ ಅಶೋಕ್ ಪೂಜಾರಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.



ಕೆದೂರು ಸದಾನಂದ ಶೆಟ್ಟಿ ಮಾತನಾಡಿ, ಸಹಕಾರಿ ಸಂಘಗಳ ಡೆಪಾಸಿಟ್ ಮೇಲೆ ಸಂಘಗಳು ಬೆಳೆಯುತ್ತವೆ. ಸಂಘಟನಾ ಚತುರ ಅಶೋಕ್ ಪೂಜಾರಿ ಯಶಸ್ಸು ಪಡೆಯಲಿ ಎಂದರು.




ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಒಡನಾಟವಿರುವ ಅಶೋಕ ಪೂಜಾರಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸಾದನೆ ಮಾಡಿದ್ದಾರೆ ಎಂದರು.



ಬೈಂದೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಮಾತನಾಡಿ, ಅಶೋಕ್‌ಪೂಜಾರಿ ಕ್ರಿಯಾಶೀಲ ವ್ಯಕ್ತಿ. ಅವರು ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಬೆಳೆಸುತ್ತಾರೆ ಎಂದರು.



ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ ಇದರ ಉಪಾಧ್ಯಕ್ಷ ರಾಜು ತೋಟದಬೆಟ್ಟು ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಅಶೋಕ ಪೂಜಾರಿ. ಸುಖ ದುಃಖ ಎರಡರಲ್ಲಿಯೂ ಜನರ ಜೊತೆ ನಿಲ್ಲುವವರು. ಅವರು ಇನ್ನಷ್ಟು ದೊಡ್ಡ ಸಾಧನೆ ಮಾಡುವಂತಾಗಲಿ ಎಂದರು.





ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ಚಾತ್ರಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಕೋಟೇಶ್ವರ ಪ್ರಾರ್ಥಿಸಿದರು. ಟೀಂ ಅಶೋಕ ಪೂಜಾರಿ ಬಳಗ ದಿನೇಶ್ ಸುವರ್ಣ ಚಾತ್ರಬೆಟ್ಟು ಸ್ವಾಗತಿಸಿದರು. ಚಂದ್ರಶೇಖರ್ ಬಿಜಾಡಿ ನಿರೂಪಿಸಿ ವಂದಿಸಿದರು.