ಆತ್ಮಗಳು ಮಾತಾಡಿದಾಗ….!
#ಜಯಶೇಖರ್ ಮಡಪ್ಪಾಡಿ
ಪಾಪದ ಕೊಡ ತುಂಬದ ಹೊರತು ಪಾಪಗಳಿಗೆ ಪ್ರಾಯಶ್ಚಿತವೂ ಇಲ್ಲ; ಪಾಪಿಗಳಿಗೆ ಪಾಪಪ್ರಜ್ಞೆ ಕಾಡುವುದೂ ಇಲ್ಲ. ಪಾಪಿಗಳ ವಿರುದ್ಧ ಹೋರಾಡುವ ಮನಸ್ಸುಗಳೂ ಒಟ್ಟಾಗುವುದಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು.. ಆಗ ಮಾತ್ರವೇ ಅಡ್ಡ ಬಿದ್ದ ಆತ್ಮಗಳು ಎದ್ದು ಕೂತು ಮಾತನಾಡುತ್ತವೆ!

ವಿಷ್ಣುವಿನ ದಶಾವತಾರಗಳ ಬಗ್ಗೆ ಕೇಳಿದ್ದೀವಿ. ಪುರಾಣಗಳ ಪ್ರಕಾರ, ವಿಷ್ಣು ವಿವಿಧ ರೂಪಗಳಲ್ಲಿ ಭೂಲೋಕದಲ್ಲಿ ಕಾಣಿಸಿಕೊಳ್ಳುತ್ತಾನೆ. ಕೆಲವೊಂದು ಅವತಾರಗಳಲ್ಲಿ ತಾರ್ಕಿಕವಾಗಿ, ತಾತ್ಕಾಲಿಕವಾಗಿ ಕಾಣಿಸಿಕೊಂಡು ಆತನ ಕೆಲಸಗಳನ್ನು ಬೇಗನೇ ಮುಗಿಸಿ ಹೋಗುತ್ತಾನೆ. ಇನ್ನು ಕೆಲವು ಅವತಾರಗಳಲ್ಲಿ ಮನುಷ್ಯನಾಗಿ ಜನಿಸಿ ದೀರ್ಘಕಾಲದ ವರೆಗೆ ಭೂಮಿಯ ಮೇಲಿದ್ದು ದುಷ್ಟರನ್ನು ಸಂಹಾರ ಮಾಡಿ ತಾನು ಪರರಂತೆ ಸ್ವರ್ಗವಾಸಿಯಾಗುತ್ತಾನೆ ಎನ್ನುವುದು ಪುರಾಣದಲ್ಲಿ ಕಂಡು ಬರುವ ಅಂಶಗಳು.
ಇದೆಲ್ಲವೂ ಪುರಾಣ ಕಥೆಗಳಾದರೆ ಇನ್ನು ಕೆಲವು ಕಥೆಗಳಲ್ಲಿ ನಾವೇ ಸೃಷ್ಟಿಸಿದ ದೇವರ ಕಥೆಗಳೂ ನಮ್ಮ ಸುತ್ತಮುತ್ತಲೂ ಚಾಲ್ತಿಯಲ್ಲಿವೆ. ಅಂತಹಾ ಕತೆಗಳ ಪೈಕಿ ಶಿರ್ಡಿ ಸಾಯಿಬಾಬಾ, ಪುಟ್ಟಪರ್ತಿ ಸಾಯಿಬಾಬಾ, ಗುರುರಾಘವೇಂದ್ರ, ಕೊರಗಜ್ಜ, ಕೋಟಿ ಚೆನ್ನಯ್ಯ ಹೀಗೇ…

ವಿಶೇಷವೆಂದರೆ, ಇದೆಲ್ಲವನ್ನೂ ಮೀರಿ ಕೆಲವು ದೇವಸ್ಥಾನಗಳ ಮೊಕ್ತೇಸರರು, ಆಡಳಿತ ಧರ್ಮದರ್ಶಿಗಳು, ಗುರೂಜಿಗಳು, ಕೆಲವು ರಾಜಕೀಯ ಮುಖಂಡರೂ ಸ್ವಯಂಘೋಷಿತ ದೇವಮಾನವರಾಗಲು ಹೊರಟಿದ್ದಾರೆ. ಕೆಲವರು ಅಂತಹಾ ಪ್ರಯತ್ನಗಳಲ್ಲಿ ಯಶಸ್ಸು ಕಂಡಿದ್ದಾರೆ ಕೂಡಾ!!
ಇಂತಹಾ ಹಲವು ಘಟನೆಗಳು ನಮ್ಮ ಕಣ್ಣೆದುರು ನಡೆದು ಹೋಗಿರುವುದನ್ನು ನೋಡಿದ್ದೇವೆ. ಸ್ವಯಂಘೋಷಿತ ದೇವ ಮಾನವರನ್ನು ನಾವು ಒಪ್ಪಿಕೊಂಡ ಮೇಲೆ ಅವರ ಮುಖವಾಡ ಬಯಲಾಗಿದ್ದನ್ನೂ ನೋಡಿದ್ದೇವೆ. ಆದರೂ ನಮ್ಮಲ್ಲಿ ಒಂದಷ್ಟು ಅಂಧಕಾರ, ಮೌಢ್ಯತೆ ಮನೆಮಾಡುವುದರಿಂದ ಸಾರಾಸಗಟಾಗಿ ಮರೆತು ಬಿಡು ಎಂದರೆ ಅದು ಹೇಗೆ ಸಾಧ್ಯ ಹೇಳಿ?! ಆಗ ಆತ್ಮಗಳು ಮಾತನಾಡಲಾರಂಭಿಸುತ್ತವೆ!. ತಮ್ಮ ಆತ್ಮ ಚರಿತ್ರೆಯನ್ನು ಗಾಳಿಯಲ್ಲಿ ಪಿಸುಗುಡಲಾರಂಭಿಸುತ್ತವೆ.
ದಶಕಗಳಿಂದ ಮಣ್ಣಡಿಯಲ್ಲಿ ಶಾಂತವಾಗಿ ಮಲಗಿದ್ದ ನೂರಾರು ಪ್ರೇತಾತ್ಮಗಳು ದಡಕ್ಕನೆ ಎದ್ದು ಕುಳಿತುಕೊಂಡುಬಿಡುತ್ತವೆ.! ಅವಕ್ಕೆ ಬೇಕಾಗಿರೋದು ತಮ್ಮ ಕಥೆಗಳನ್ನು ಸೀರಿಯಸ್ಸಾಗಿ ಕೇಳಿಸಿಕೊಳ್ಳುವ ಕಿವಿಗಳಿಗಿಂತಲೂ ಅತ್ಯಾಪ್ತವಾದ ಮನಸ್ಸುಗಳು.. ಅಷ್ಟೇ!
ಪುರಾಣ ಕಾಲದಿಂದಲೂ ಬಡವ ಬಡವನಾಗಿಯೇ ಮತ್ತು ಶ್ರೀಮಂತ ಶ್ರೀಮಂತನಾಗಿಯೇ ಬೆಳೆಯುತ್ತಾ ಬಂದ ಕಾಲಘಟ್ಟಗಳಲ್ಲಿ ಸ್ವಯಂಘೋಷಿತ ದೇವಮಾನವರ ಕೊಡುಗೆ ಸಾಕಷ್ಟಿದೆ. ತಮ್ಮ ಅಧಿಕಾರ, ತಮ್ಮ ವರ್ಚಸ್ಸು, ತಮ್ಮ ಜಾತಿ, ತಮಗಿರುವ ಆಡಳಿತ ವರ್ಗಗಳ ಬೆಂಬಲ ಇವೆಲ್ಲವೂ ಜೀತದಾಳುಗಳಂತೆ ದುಡಿಯುವ ವರ್ಗವನ್ನು ತಮಗೆ ಬೇಕಾದ ಹಾಗೇ ದಂಡಿಸಿ ಹೊಗಳು ಭಟರಂತೆ, ತಮ್ಮನ್ನು ಆರಾಧಿಸುವ ಭಕ್ತರಂತೆ, ತನ್ನೆದುರು ಬಗ್ಗದವರಿಗೆ ನಡುಬಗ್ಗಿಸುವಂತೆ ಮಾಡುವ ತಂಡಗಳೂ ಇವರ ಬಳಿ ಸಿದ್ಧಗೊಂಡಿರುತ್ತವೆ. ಅದಕ್ಕೆ ಆಳುವ ವರ್ಗ ವ್ಯವಸ್ಥಿತವಾಗಿ ಬೆಂಗಾವಲಾಗಿ ನಿಂತುಬಿಡುತ್ತದೆ. ಕಾನೂನು ಕಾಯ್ದೆಗಳೂ ಇವರಿಗೆ ಲೆಕ್ಕಕ್ಕೇ ಇಲ್ಲ. ನ್ಯಾಯಾಂಗಕ್ಕಂತೂ ಮೊದಲೇ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲಲ್ಲಿಡಲಾಗಿದೆ.! ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಇಂತಹಾ ದೇವಮಾನವರೇ ನಂಬರ್ ವನ್ ಟಿಆರ್ಪಿ! ಕೆಲವು ಮಾಧ್ಯಮಗಳು ಈಗಾಗಲೇ ಸೋಲ್ಡ್ ಔಟಾಗಿವೆ ಎನ್ನುವ ಭ್ರಮಾವಲಯವನ್ನು ತಮ್ಮ ನಡವಳಿಕೆಗಳಿಂದ ಸೃಷ್ಟಿಸಿಕೊಂಡಿವೆ.

ಪಾಪದ ಕೊಡ ತುಂಬದ ಹೊರತು ಪಾಪಗಳಿಗೆ ಪ್ರಾಯಶ್ಚಿತವೂ ಇಲ್ಲ; ಪಾಪಿಗಳಿಗೆ ಪಾಪಪ್ರಜ್ಞೆ ಕಾಡುವುದೂ ಇಲ್ಲ. ಪಾಪಿಗಳ ವಿರುದ್ಧ ಹೋರಾಡುವ ಮನಸ್ಸುಗಳೂ ಒಟ್ಟಾಗುವುದಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು.. ಆಗ ಮಾತ್ರವೇ ಅಡ್ಡ ಬಿದ್ದ ಆತ್ಮಗಳು ಎದ್ದು ಕೂತು ಮಾತನಾಡುತ್ತವೆ! ಕರಾವಳಿಯಲ್ಲಿ ಕಲಿಯುಗದ ಅಂತ್ಯ ಆರಂಭವಾಗಿದೆಯಾ?! ಗೊತ್ತಿಲ್ಲ. ಆದರೆ ಆತ್ಮಗಳು ಎದ್ದು ಕೂತಿವೆ. ತಮ್ಮೊಳಗಿನ ಕಥೆಯನ್ನು ಹೇಳಲು ಸಿದ್ಧವಾಗಿವೆ. ತಮ್ಮ ಜೊತೆಗೆ ತಮ್ಮಂತಹಾ ನೂರಾರು ಆತ್ಮಗಳ ಚರಿತ್ರೆಯನ್ನು ದಾಖಲಿಸಲು ಮುಂದಾಗಿವೆ. ಮಣ್ಣಲ್ಲಿ ಮಣ್ಣಾದ ಅಸ್ಥಿಪಂಜರಗಳು ಸಾಕ್ಷಿ ಹೇಳಲು ಕಟಕಟೆಯಲ್ಲಿ ಕಾಯುತ್ತಿವೆ.
ಜೀವಾತ್ಮಗಳು ಪ್ರೇತಾತ್ಮಗಳ ಮೂಲ ಧ್ವನಿಯಾಗಬೇಕಿದೆ. ಉಳಿದಂತೆ ಆತ್ಮಕಥೆಗಳಿಗೆ ಕಿವಿಯಾಗಲು ಕಾರ್ಯಾಂಗ, ನ್ಯಾಯಾಂಗಗಳು ತಮ್ಮ ಕಿವಿಗಳ ಗುಗ್ಗೆ ತೆಗೆಸಿ ಸ್ವಚ್ಚವಾಗಿ ಕೇಳಿಸಿಕೊಳ್ಳಲು ಕಾಯಬೇಕಿದೆ. ಎಲ್ಲದಕ್ಕೂ ಮುಖ್ಯವಾಗಿ ಶಾಸಕಾಂಗ ಒಂದಷ್ಟು ಸಮಯ ನವರಂಧ್ರಗಳನ್ನು ಮುಚ್ಚಿಕೊಂಡು ಕೂರಲೇಬೇಕಿದೆ.
ಅಷ್ಟೇ.. ಮತ್ತೆಲ್ಲವೂ ಸುಸೂತ್ರ.. ಪ್ರೇತಾತ್ಮಗಳಿಗೆ ಮುಕ್ತಿ.
