ಹಳ್ಳಿಹೊಳೆ: ಸಾಲ ಬಾಧೆ, ಸಂಸಾರದಲ್ಲಿ ಗೊಂದಲ – ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಆತ್ಮಹತ್ಯೆ
ಕುಂದಾಪುರ: ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿ ಹೊಳೆ ಸಮೀಪದ ಕಮಲಶಿಲೆ ಎಂಬಲ್ಲಿ ನಡೆದಿದೆ.

ಹಳ್ಳಿಹೊಳೆ ಸಮೀಪದ ಚಕ್ರ ಮೈದಾನದ ಸಮೀಪದ ಸುಳುಗೋಡು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ, ಮೂಲತ ಚಿತ್ರದುರ್ಗ ಜಿಲ್ಲೆಯವರಾದ ಕುಬೇರ ಡಿ ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು.
ಹೊಸಂಗಡಿ ಕೆಪಿಸಿ ಕಾಲೋನಿಯಲ್ಲಿ ವಾಸವಾಗಿದ್ದ ಕುಬೇರ, ಸೋಮವಾರ ಬೆಳಿಗ್ಗೆ ಮನೆಯಿಂದ ಶಾಲೆಗೆಂದು ಹೊರಟವರು ಕಮಲಶಿಲೆಯಲ್ಲಿ ಮರವೊಂದಕ್ಕೆ ನೈಲ್ ಹಗ್ಗದಿಂದ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊದಲು 20 ವರ್ಷಗಳ ಕಾಲ ಎಡಮೊಗ್ಗೆ ಹಿರಿಯ ಪ್ರಾರ್ಥಮಿಕ ಶಾಲೆ ಅಜ್ಜಿಕಾನು ಇಲ್ಲಿ ಶಿಕ್ಷಕರಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸುಳಗೋಡು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹೊಸಂಗಡಿ ಕಾಂಪ್ಲೆಕ್ಸ್ ನಲ್ಲಿ ಹಿಟ್ಟಿನ ಗಿರಣಿ ಅಂಗಡಿಯನ್ನೂ ನಡೆಸುತ್ತಿದ್ದರು.
ಇತ್ತೀಚಿಗೆ ಸಂಬಂಧಿಕರ ಮದುವೆಗೆಂದು ಸಾಲ ಮಾಡಿದ್ದರು ಅಲ್ಲದೆ ಈ ಹಿಂದೆ ಹಲವು ಸಾಲಗಾರರಿಗೆ ಬ್ಯಾಂಕ್ ಜಾಮೀನು ಹಾಕಿದ್ದರು. ಆದರೆ ಸಾಲ ಮರುಪಾವತಿ ಮಾಡದೆ ಇದ್ದುದರಿಂದ ಶಿಕ್ಷಕ ಕುಬೇರ ಅವರಿಗೆ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದೆ ಅಲ್ಲದೆ ತುಳುಗೋಡು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದ ಪರಿಣಾಮ ಅವರನ್ನು ದೂರದ ಶಾಲೆಗೆ ಡೆಪ್ಯುಟೇಷನ್ ಮಾಡಲಾಗುತ್ತದೆ ಎನ್ನುವ ಭಯ ಕಾಡಿತ್ತು ಎನ್ನಲಾಗಿದೆ ಇದರ ಜೊತೆಗೆ ಸಂಸಾರದಲ್ಲಿಯೂ ಹೊಂದಾಣಿಕೆ ಬರುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ ಇದೆಲ್ಲದರಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಶಿಕ್ಷಕ ಕುಬೇರ ಅವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಗೃಹಿಣಿಯಾಗಿದ್ದಾರೆ. ಹಿರಿಮಗಳು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಎರಡನೆಯವಳು ಮಂಗಳೂರಿನಲ್ಲಿ ಈಗ ತಾನೇ ಕೆಲಸಕ್ಕೆ ಸೇರಿದ್ದಾಳೆ. ಕಿರಿಯವಳು ಹೆಬ್ರಿಯ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ.
ಶಂಕರನಾರಾಯಣ ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಶವಪರೀಕ್ಷೆಗೆ ಕುಂದಾಪುರ ಸರಗಕಾರಿಬಾಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
