ಉಡುಪಿ: ಜಿಲ್ಲಾ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ಸಂದೀಪ್ ಜೆ.ಯು, ಒತ್ತಡಗಳ ನಡುವೆಯೇ ಕೊಡಗು ಜಿಲ್ಲೆಗೆ ವರ್ಗಾವಣೆ!?

ಉಡುಪಿ: ಜನರಲ್ ಟ್ರಾನ್ಸ್ಫರ್ ಅಡಿಯಲ್ಲಿ ವರ್ಗಾವಣೆಯಾಗಿದ್ದ ಉಡುಪಿ ಜಿಲ್ಲೆಯ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ್ ಜಿ ಎಂಬುವರ ವರ್ಗಾವಣೆಯನ್ನು ಊರ್ಜಿತಗೊಳಿಸಿ ರಾಜ್ಯ ಗಣಿ ಸಚಿವ ಮಲ್ಲಿಕಾರ್ಜುನ ಅವರು ಆದೇಶ ನೀಡಿದ್ದಾರೆ.

ಆ ಮೂಲಕ ಆಡಳಿತ ಪಕ್ಷದ ನಾಯಕರ ಒತ್ತಡಗಳ ನಡುವೆಯೇ ಜಿಲ್ಲಾ ಗಣಿ ಅಧಿಕಾರಿ ಸಂದೀಪ್ ಜೆಯು ಕೊಡಗು ಜಿಲ್ಲೆಗೆ ಮಾಡಲಾದ ವರ್ಗಾವಣೆ ಖಚಿತವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬೇರೂರಿದ್ದ ಗಣಿ ಅಧಿಕಾರಿ ಸಂದೀಪ್ ಜೆ.ಯು, ರಾಜಕಾರಣಿಗಳು ಹಾಗೂ ಕೆಲವು ಗಣಿ ಮಾಲಕರ ಜೊತೆ ಸೇರಿ ಸರ್ಕಾರಕ್ಕೆ ಕೋಟ್ಯಂತರ ರಾಜಧನ ವಂಚಿಸಿದ ಆರೋಪ ಹೊತ್ತಿದ್ದು, ಇವರ ವರ್ಗಾವಣೆಗೆ ಆಡಳಿತ ಪಕ್ಷದ ಯುವ ನಾಯಕರ ಪಡೆ ಸಿದ್ಧವಾಗಿತ್ತು. ಆದರೆ ಅದೇ ಪಕ್ಷದ ಕೆಲವು ಹಿರಿಯ ನಾಯಕರು, ಮಾಜೀ ಶಾಸಕರು ಹಾಗೂ ಮಾಜೀ ಸಚಿವರು ಹಾಗೂ ವಿರೋಧ ಪಕ್ಷದ ಕೆಲವು ನಾಯಕರು ಭ್ರಷ್ಟ ಅಧಿಕಾರಿಯ ವರ್ಗಾವಣೆ ವಿರೋಧಿಸಿ ಸರ್ಕಾರದ ಮಟ್ಟದಲ್ಲಿ ಅಧಿಕಾರಿ ಪರ ವಕಾಲತ್ತು ನಡೆಸಿದ್ದರು. ಅದರಂತೆ ಸಂದೀಪ್ ಮತ್ತೆ ಉಡುಪಿ ಜಿಲ್ಲೆಗೇ ವಕ್ಕರಿಸುತ್ತಾನೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಸಂದೀಪ ಮತ್ತೆ ಉಡುಪಿ ಜಿಲ್ಲೆಗೆ ವಾಪಾಸ್ಸಾಗಲು ಆಡಳಿತ ಪಕ್ಷದ ಕೆಲವು ನಾಯಕರು, ಗಣಿಮಾಲಕರು ಒಟ್ಟಾಗಿ ಒಂದು ಕೋಟಿ ಆಫರ್ ಇಟ್ಟಿದ್ದರು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ಪ್ರಭಾವೀ ಮಾಜೀ ಶಾಸಕರೊಬ್ಬರು ಮಾತನಾಡಿದ ಮೊಬೈಲ್ ಸಂಭಾಷಣೆಯ ಆಡಿಯೋ ಕೂಡಾ ವಿಧಾನಸೌಧದವರೆಗೂ ಹರಿದಾಡಿದ್ದು, ಇದೇ ಕಾರಣಕ್ಕೆ ಭ್ರಷ್ಟ ಅಧಿಕಾರಿ ಎನ್ನುವ ಆರೋಪ ಹೊತ್ತಿರುವ ದುರಂಹಕಾರಿ ಸಂದೀಪ್ ಜೆ.ಯು. ಕೊಡಗು ಜಿಲ್ಲೆಗೆ ವರ್ಗಾವಣೆಯಾಗಿದ್ದು, ಸೋಮವಾರ ಉಡುಪಿ ಜಿಲ್ಲೆಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾಗಿ ಚಿಕ್ಕಮಗಳೂರಿನ ವಿಂದ್ಯಾ ಅಧಿಕಾರ ಸ್ಬೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
