ಜುಲೈ 2ರಿಂದ ಬಿಜೆಪಿ ಸುಳ್ಳು ಪ್ರತಿಭಟನೆಗೆ ಕಾಂಗ್ರೆಸ್ ಸತ್ಯ ದರ್ಶನ, ಪ್ರತಿಭಟನಾ ಸಪ್ತಾಹ – ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಕುಂದಾಪುರ: ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜ್ಯಾರಿಗೆ ತಂದಿದ್ದ 9/ 11 ಏಕ ನಿವೇಶನ, ಅಕ್ರಮ – ಸಕ್ರಮ ಯೋಜನೆಯಲ್ಲಿ 53 ಮತ್ತು 57 ರಲ್ಲಿ ಅರ್ಜಿ ತಿರಸ್ಕರಿಸಲು ಮತ್ತು ವೃದ್ದಾಪ್ಯ ವೇತನ , ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳ ಮರು ಸಮೀಕ್ಷೆ ಕುರಿತು ಹಾಗೂ ವಿದ್ಯುತ್ ದರ ಎರಿಕೆಯಂತಹ ಸುತ್ತೋಲೆ ಮತ್ತು ಆದೇಶ ಹೊರಡಿಸಿದ್ದು, ಇದನ್ನೆಲ್ಲಾ ಈಗಿನ ಕಾಂಗ್ರೆಸ್ ತಲೆಗೆ ಕಟ್ಟಲಾಗುತ್ತಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಜೂನ್ 23 ರಂದು ಬಿಜೆಪಿ ಪ್ರತಿ ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನಡೆಸುವ ಮೂಲಕ ತಾನು ಮಾಡಿದ ಅನ್ಯಾಯಗಳನ್ನು ಕಾಂಗ್ರೆಸ್ ಮಾಡಿದೆ ಎಂದು ಸುಳ್ಳು ಮತ್ತು ಅಪಪ್ರಚಾರ ಮಾಡಿ ಮುಂದೆ ಬರುವ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಮತದಾರರ ಅನುಕಂಪ ಪಡೆಯಲು ಯತ್ನಿಸಿದೆ ಎಂದು ಆರೋಪಿಸಿದ ಅವರು, ಈ ವಿಚಾರಗಳ ಕುರಿತು ವಾಸ್ತವ ವಿಚಾರ ಮತ್ತು ಸತ್ಯವನ್ನು ಜನರ ಮುಂದಿಡಲು ಜುಲೈ 7ರಿಂದ ಒಂದು ವಾರಗಳ ಕಾಲ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ( ಜಿಲ್ಲಾ ಪಂಚಾಯತ್ ಗೆ 1 ಗ್ರಾಮ ಪಂಚಾಯತ್ ನಂತೆ ) ಪ್ರತಿ ದಿನ 3 ಗ್ರಾಮ ಪಂಚಾಯತ್ ಎದುರು ಬೆಳಿಗ್ಗೆ 10 ಘಂಟೆಗೆ “ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯ ದರ್ಶನ – ಪ್ರತಿಭಟನಾ ಸಪ್ತಾಹ” ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
