ರಾಜಕೀಯ ಚಕ್ರವ್ಯೂಹದ ಮುತ್ಸದ್ಧಿ : ಬೈಂದೂರು ಬಿಜೆಪಿಯ ತೆರೆಮರೆಯ ನಾಯಕ ಬಿ.ಎಸ್. ಸುರೇಶ್ ಶೆಟ್ಟಿ
ಬೈಂದೂರು: ರಾಜಕೀಯ ಚಕ್ರವ್ಯೂಹದ ಪಡಸಾಲೆಯಂತಿರುವ ಬೈಂದೂರು ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಮಿಶ್ರಣವಾಗಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ವ್ಯವಹಾರಿಕ ಸ್ಥಿತ್ಯಂತರಗಳನ್ನು ನಾವು ಕಾಣುತ್ತೇವೆ. ರಾಜಕೀಯವಾಗಿ ಮತ್ತಷ್ಟು ವಿಭಿನ್ನವಾಗಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಿಂದ ಭಾರತೀಯ ಜನತಾ ಪಕ್ಷವು ನಿರಂತರವಾಗಿ ಕಾಂಗ್ರೆಸ್ ನ ಭದ್ರಕೋಟೆಯನ್ನು ಭೇದಿಸಿ ಅಧಿಕಾರದ ಗದ್ದುಗೆ ಹಿಡಿದರೆ ಅದಕ್ಕೆ ಮುಂಚೂಣಿಯ ನಾಯಕರು ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಾರೋ ಅಷ್ಟೇ ಮುಖ್ಯ ಪಾತ್ರದಲ್ಲಿ ತೆರೆಮರೆಯ ನಾಯಕರುಗಳಾಗಿ ಸಾಕಷ್ಟು ಮುತ್ಸದ್ದಿಗಳು ಕೆಲಸ ಮಾಡಿರುವುದು ಸುಳ್ಳಲ್ಲ.

ಇಂತಹಾ ತೆರೆಮರೆಯ ರಾಜಕೀಯ ಮುತ್ಸದ್ಧಿಗಳಲ್ಲಿ ಮುಂಚೂಣಿಯಲ್ಲಿರುವವರು ಬಿ.ಎಸ್.ಸುರೇಶ್ ಶೆಟ್ಟಿ. ಚುನಾವಣೆ ಬಂತೆಂದರೆ ಸಾಕು, ತನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ಸಂಪೂರ್ಣವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ರಾಜಕೀಯ ತಂತ್ರಗಾರಿಕೆಗಳ ಮೂಲಕ ಚುನಾವಣಾ ಆರ್ಥಿಕ ಸಮತೋಲವನ್ನು ಸಾಧಿಸಿ, ಬಿಜೆಪಿಯ ಯಶಸ್ವಿ ನಾಗಾಲೋಟಕ್ಕೆ ಪ್ರಯತ್ನಪಡುವವರಲ್ಲಿ ಆರ್ ಎಸ್ ಎಸ್, ಬಿಜೆಪಿಯ ಹಿರಿಯ ಮತ್ತು ತೆರೆಮರೆಯ ನಾಯಕ ಬಿಎಸ್ ಸುರೇಶ್ ಶೆಟ್ಟಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿದ್ದ ಬರಿಗಾಲ ಸಂತ ನಾಮಾಂಕಿತ ಗುರುರಾಜ್ ಶೆಟ್ಟಿ ಗಂಟಿಹೊಳೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಬಿಎಸ್ ಸುರೇಶ್ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಬಿಡುತ್ತದೆ.. ಎನ್ನುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಅಧಿಕಾರವನ್ನು ಭಾರತೀಯ ಜನತಾ ಪಾರ್ಟಿ ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕದ ಸ್ಥಿತ್ಯಂತರಗಳನ್ನು ನಾವೆಲ್ಲರೂ ನೋಡುತ್ತಾ ಬಂದಿದ್ದೇವೆ. ಆದರೆ ಬೈಂದೂರಿನ ರಾಜಕೀಯ ವ್ಯವಸ್ಥೆಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ಸೋತ ಕಾಂಗ್ರೆಸ್ಸಿಗಿಂತ ಗೆದ್ದ ಬಿಜೆಪಿಯ ಮಧ್ಯದಲ್ಲಿ ಇದ್ದಂತಹ ಒಡಕುಗಳು, ಭಿನ್ನಾಭಿಪ್ರಾಯಗಳು, ಮಾತುಕತೆ-ಚರ್ಚೆಗಳು ಬಹುಶಃ ಬೇರೆ ಯಾವ ವಿಧಾನಸಭಾ ಕ್ಷೇತ್ರದ ರಾಜಕೀಯ ಪಡಸಾಲೆಯಲ್ಲಿ ನಡೆದಿರಲು ಸಾಧ್ಯವಿಲ್ಲ.

ಬಿಜೆಪಿಯ ಮಂಡಲ ಅಧ್ಯಕ್ಷರಾಗಿದ್ದ ದೀಪಕ್ ಕುಮಾರ್ ಶೆಟ್ಟಿ ಮತ್ತು ಇವರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ ಬಿಜೆಪಿಯ ಕಾರ್ಯಕರ್ತರ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ಬೈಂದೂರು ಬಿಜೆಪಿ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ, ನಿರಾಸೆಯನ್ನು ಮೂಡಿಸಿದ್ದು ಸುಳ್ಳಲ್ಲ. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ದೀಪಕ್ ಶೆಟ್ಟಿ ಪಕ್ಷ ವಿರೋಧಿ ಚಟುವಟಿಕೆ ಹಾಗೂ ರಾಜಕೀಯ ಕುತಂತ್ರಗಾರಿಕೆ ನಡೆಸಿದ್ದಾರೆ ಎನ್ನುವ ಆರೋಪಗಳು ಬಿಜೆಪಿಯ ಕಾರ್ಯಕರ್ತರ ವಲಯದಿಂದ ಕೇಳಿಬಂದಿತ್ತು. ಇದೆಲ್ಲದರಿಂದ ಶಾಸಕರಿಗೆ ಮತ್ತು ಸಂಸದರಿಗೆ ಮುಜುಗರ ಉಂಟಾದಾಗಲೂ ನಿರ್ಲಿಪ್ತ ಭಾವದಿಂದ ರಾಜಕೀಯ ತಂತ್ರಗಾರಿಕೆಯ ಮೂಲಕ ಎಲ್ಲವನ್ನು ಮೀರಿ ನಿಂತ ಮೇರು ವ್ಯಕ್ತಿ ಬಿ.ಎಸ್.ಸುರೇಶ್ ಶೆಟ್ಟಿ.

ಯಾರೀ ಬಿ.ಎಸ್.ಸುರೇಶ್ ಶೆಟ್ಟಿ? : ಬಿ.ಎಸ್. ಸುರೇಶ್ ಶೆಟ್ಟರ ರಾಜಕೀಯ ಹಾದಿಯನ್ನು ವಿವರಿಸಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಬೇಕು. ದಿವಂಗತ ಬಿ. ಎಸ್. ಪ್ರಭಾಕರ ಶೆಟ್ಟಿ ಆ ಕಾಲದಲ್ಲಿ ಅತ್ಯಂತ ಹೆಸರು ಪಡೆದಿದ್ದ ಧೀಮಂತ ರಾಜಕೀಯ ನಾಯಕರಲ್ಲಿ ಒಬ್ಬರು. ಅದು ಬೈಂದೂರು ಮಟ್ಟಿಗೆ ಕಾಂಗ್ರೆಸ್ ಅಂದರೆ ಪ್ರಭಾಕರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಅಂದರೆ ಕಾಂಗ್ರೆಸ್ ಎನ್ನುವ ಕಾಲವಾಗಿತ್ತು. ನಂತರದ ರಾಜಕೀಯ ವೈಪರೀತ್ಯಗಳಿಂದಾಗಿ ಪ್ರಭಾಕರ ಶೆಟ್ಟರು ಬಿಜೆಪಿ ಸೇರಿದರು. ಅಂದಿನಿಂದ ಪ್ರಭಾಕರ ಶೆಟ್ಟರ ಮಗ ಇದೇ ಬಿ.ಎಸ್.ಸುರೇಶ್ ಶೆಟ್ಟಿ ಬಿಜೆಪಿಯ ಪಡಸಾಲೆಯಲ್ಲಿ ಆರ್ ಎಸ್ ಎಸ್ ಸಹವಾಸದೊಂದಿಗೆ ಬೆಳೆದರು.

ಜೊತೆಗೆ ಗ್ರಾಮೀಣ ಭಾಗದ ಯುವ ಜನತೆಗೆ ಉದ್ಯೋಗ ನೀಡಬೇಕು ಆ ಮೂಲಕ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ವಲಸೆ ಹೋಗುವುದನ್ನು ತಪ್ಪಿಸಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದಿರುವ ಬಿಎಸ್ ಸುರೇಶ ಶೆಟ್ಟಿ, ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮುವುದರ ಜೊತೆಗೆ ಅಜನೋರಾ ಸಂಸ್ಥೆಯ ಪಾಲುದಾರಿಕೆಯ ಮೂಲಕ ಕೌಶಲ್ಯ ಭಾರತ ಯೋಜನೆಯನ್ನು ಅನುಷ್ಠಾನಿಸಿ ಉದ್ಯೋಗ, ಕೃಷಿ ತಂತ್ರಜ್ಞಾನಗಳನ್ನು ಗ್ರಾಮೀಣ ಯುವಕ ಯುವತಿಯರು ಅಧ್ಯಯನ ಮಾಡಿ ಸ್ವಾವಲಂಭಿಗಳಾಗಬೇಕು ಎಂದು ಕನಸು ಕಂಡವರು. ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕು, ಎನ್ನುವ ನಿರ್ಧಾರದೊಂದಿಗೆ ಅತೀ ಕಡಿಮೆ ಬೆಲೆಯಲ್ಲಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ತಲುಪಬೇಕು ಎನ್ನುವ ಧ್ಯೇಯದೊಂದಿಗೆ ಸಿದ್ಧಾಪುರದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ.

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್ ಸದಸ್ಯರಾಗಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಅಧ್ಯಕ್ಷರಾಗಿ ತನ್ನದೇ ರೀತಿಯಲ್ಲಿ ಬಿ.ಎಸ್.ಸುರೇಶ್ ಶೆಟ್ಟಿ ಸೇವೆ ಸಲ್ಲಿಸಿದವರು. ಬೈಂದೂರು ಮಂಡಲದ ಅಧ್ಯಕ್ಷರಾಗಿದ್ದ ಸಂದರ್ಭ ಬಿ.ಎಸ್. ಸುರೇಶ್ ಶೆಟ್ಟಿ ಅವರ ಕಾಲೆಳೆಯುವ ತಂತ್ರ ನಡೆದಿತ್ತು. ಪರಿಣಾಮವಾಗಿ ಸಕ್ರಿಯ ರಾಜಕಾರಣದಿಂದ ತುಸು ದೂರವಿದ್ದ ಸುರೇಶ್ ಶೆಟ್ಟರು ತಮ್ಮ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಚುನಾವಣಾ ರಣತಂತ್ರ ಹೆಣೆಯುವುದರಲ್ಲಿ ನಿಸ್ಸೀಮರಾಗಿದ್ದ ಬಿಎಸ್ ಸುರೇಶ್ ಶೆಟ್ಟಿ, ಉತ್ತಮ ಹಣಕಾಸು ನಿರ್ವಹಣೆಯ ಜ್ಞಾನ ಹೊಂದಿದವರಾಗಿದ್ದರು. ಇದೇ ಕಾರಣಕ್ಕೆ ಬಿಜೆಪಿ ಸುರೇಶ್ ಶೆಟ್ಟರನ್ನು ಬಿಟ್ಟು ಕೊಡಲು ಒಪ್ಪಲೇ ಇಲ್ಲ. ಅದರ ಪರಿಣಾಮವಾಗಿಯೇ ಕಳೆದ ಬೈಂದೂರು ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಆರ್ಥಿಕ ನಿರ್ವಹಣೆಯ ಮಾರ್ಗದರ್ಶನದ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ನಾಯಕರು ಬಿ.ಎಸ್. ಸುರೇಶ್ ಶೆಟ್ಟರ ಹೆಗಲಿಗೆ ಹೊರಿಸಿದ್ದರು.

ಕಳೆದ ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸಾಮಾನ್ಯ ಕಾರ್ಯಕರ್ತ, ಬರಿಗಾಲಸಂತ ಗುರುರಾಜ್ ಗಂಟಿಹೊಳೆ ಅವರ ಗೆಲುವಿಗೆ ಆರ್ಥಿಕ ನಿರ್ವಹಣೆಯ ಜೊತೆಗೆ ಚುನಾವಣಾ ತಂತ್ರಗಾರಿಕೆಯ ಜವಾಬ್ದಾರಿ ಹೊತ್ತು ಕೊನೆಯ ಕ್ಷಣದಲ್ಲಿ ಅತ್ಯಧಿಕ ಬಹುಮತಗಳನ್ನು ಸಾಧಿಸಲು ತೆರೆಮರೆಯ ಕಸರತ್ತು ನಡೆಸಿ ಸುರೇಶ್ ಶೆಟ್ಟಿ ತಂಡ ಯಶಸ್ವಿಯಾಗಿತ್ತು. ಇದನ್ನು ಮನಗಂಡ ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಮತ್ತು ಬೈಂದೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿ. ವೈ. ರಾಘವೇಂದ್ರ ಅವರ ಗೆಲುವಿಗೆ ಬೈಂದೂರು ಕ್ಷೇತ್ರದ ಜವಾಬ್ದಾರಿಯನ್ನು ಮತ್ತೊಮ್ಮೆ ಬಿಎಸ್ ಸುರೇಶ ಶೆಟ್ಟರ ಹೆಗಲಿಗೆ ಹೊರಿಸಿದ್ದರು. ಅದರಲ್ಲೂ ಯಶಸ್ವಿ ಸಾಧಿಸಿದ ಬಿ.ಎಸ್. ಸುರೇಶ್ ಶೆಟ್ಟಿ, ರಾಜಕೀಯದ ಯಾವುದೇ ಗುರುತರ ಹುದ್ದೆಗಳ ನಿರೀಕ್ಷೆ ಮಾಡದೆ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಇದೀಗ ರಾಜ್ಯ ಬಿಜೆಪಿಯಲ್ಲಿ ಸಂಘಟನಾ ಪರ್ವ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಹಿತದೃಷ್ಟಿಯಿಂದ ಪದಾಧಿಕಾರಿಗಳ ಬದಲಾವಣೆ ಅನಿವಾರ್ಯ ಎಂದಾಗ ಬೈಂದೂರು ಬಿಜೆಪಿಗೆ ಉತ್ತಮ ಸಾರಥ್ಯವನ್ನು ಗುರುತಿಸಿ ಕೊಟ್ಟವರಲ್ಲಿ ಬಿ.ಎಸ್. ಸುರೇಶ್ ಶೆಟ್ಟಿ ಅಗ್ರಸ್ಥಾನದಲ್ಲಿ ನಿಂತಿರುವುದು ಬಹುತೇಕರಿಗೆ ತಿಳಿದಿಲ್ಲ. ಬೈಂದೂರಿನ ಈ ಹಿಂದಿನ ಸಾರಥ್ಯ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದಾಗ ಇದೇ ಬಿ.ಎಸ್.ಸುರೇಶ್ ಶೆಟ್ಟರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಪಕ್ಷದ ಆಂತರಿಕ ನಿರ್ಣಯಗಳ ಮೂಲಕ ಘೋಷಣೆ ಮಾಡಲಾಗಿತ್ತು. ಆದರೆ ಹಿಂದೆ ಅಧ್ಯಕ್ಷನಾಗಿದ್ದಾಗ ಆದ ಅನುಭವವನ್ನು ಮರೆಯದ ಸುರೇಶ್ ಶೆಟ್ಟಿ, ಕಾರ್ಯಕರ್ತರ ಒತ್ತಾಯಕ್ಕೆ ಮಣಿಯಲೇಬೆಕಾಗಿತ್ತು. ಆಗ ಒಂದು ವರ್ಗ ಹಂಗಾಮಿ ಎಂದು ವ್ಯಂಗ್ಯವಾಡಿದ್ದರೂ ಅದನ್ನೆಲ್ಲಾ ಮೀರಿ ಇಂದು ಸಂಘಟನಾ ಪರ್ವದ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸಾರಥಿ ಒಬ್ಬರನ್ನು ಬೈಂದೂರು ಮಂಡಲಕ್ಕೆ ನೀಡುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಚಕ್ರವ್ಯೂಹ ರಚಿಸಿ ಗೆಲುವು ಸಾಧಿಸುವ ನೈಪುಣ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದಾರೆ.
