ಬೈಂದೂರು ಬಿಜೆಪಿಗೆ ಸರ್ಜರಿ: ಅನಿತಾ ಆರ್.ಕೆ. ಮುಂದಿನ ಸಾರಥಿ – ಮೊದಲ ಬಾರಿ ಮಹಿಳೆಗೆ ದಕ್ಕಿದ ಅಧ್ಯಕ್ಷ ಸ್ಥಾನ



ಕುಂದಾಪುರ: ಸಂಘಟನಾ ಪರ್ವದ ಹೆಸರಿನಲ್ಲಿ ಬೈಂದೂರು ಬಿಜೆಪಿಗೆ ಭರ್ಜರಿ ಸರ್ಜರಿ ಮಾಡಲಾಗಿದೆ. ಶುಕ್ರವಾರ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ದೀಪಕ್ ಕುಮಾರ್ ಶೆಟ್ಟಿ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜೀನಾಮೆ ಅಂಗೀಕರಿಸಿದ್ದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಕುತ್ಯಾರು, ಬೈಂದೂರು ಬಿಜೆಪಿ ಹೊಸ ಸಾರಥ್ಯವನ್ನು ಇತಿಹಾಸದಲ್ಲೇ ಮೊದಲು ಎಂಬಂತೆ ಮಹಿಳೆಯೊಬ್ಬರಿಗೆ ನೀಡಿದ್ದಾರೆ. ಸಾಮಾನ್ಯ ಮಹಿಳಾ ಕಾರ್ಯಕರ್ತೆಯಾಗಿರುವ ಅನಿತಾ ಕೆ.ಆರ್. ಹೊಸ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ! ಈ ಬಗ್ಗೆ ಬಿಜೆಪಿ ಸಂಘಟನಾ ಪರ್ವದ ಜಿಲ್ಲಾ ಚುಣಾವಣಾಧಿಕಾರಿ ರವಿಶಂಕರ್ ಮಿಜಾರು ಪ್ರಕಟಣೆ ಹೊರಟಿಸಿದ್ದಾರೆ.




ಅನಿತಾ ಅವರು ಈ ಹಿಂದೆ ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಮರವಂತೆ ಪಂಚಾಯತ್ ಅಧ್ಯಕ್ಷರಾಗಿಯೂ ಒಂದು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅಧ್ಯಕ್ಷೆ ಆಯ್ಕೆ ಘೋಷಣೆಯಾದ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಬೈಂದೂರು ಬಿಜೆಪಿ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಬಳಿಕ ಕಚೇರಿಗೆ ಆಗಮಿಸಿದ ಅಧ್ಯಕ್ಷೆ ಅನಿತಾ ಕೆ. ಆರ್. ಅವರನ್ನು ಬಿಜೆಪಿ ಮುಖಂಡರಾದ ಬಿ. ಎಸ್. ಸುರೇಶ್ ಶೆಟ್ಟಿ, ಬಾಲಚಂದ್ರ ಭಟ್, ಶಾಸಕ ಗುರುರಾಜ್ ಗಂಟಿಹೊಳೆ ಮೊದಲಾದವರು ಹಾರ ಹಾಕಿ ಸ್ವಾಗತಿಸಿ, ಬಿಜೆಪಿ ಧ್ವಜ ನೀಡಿ ಶುಭ ಕೋರಿದರು.
