ಕುಂದಾಪುರ: ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ಕುಂದಾಪುರದ ವಿದ್ಯಾರಣ್ಯ ಶಾಲೆಯ ಪ್ರಾವ್ಯ ಪಿ ಶೆಟ್ಟಿಗೆ ವೈದ್ಯೆ ಕನಸು
ಕುಂದಾಪುರ: ಈ ಬಾರಿಯ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾವ್ಯ ಪಿ.ಶೆಟ್ಟಿ 625ಕ್ಕೆ 623 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಾವ್ಯ ಪಿ. ಶೆಟ್ಟಿ, ಅಂಕ ಗಳಿಕೆ ನಿರೀಕ್ಷೆಯಲ್ಲಿದ್ದೆ. ಈ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರವೇ ಕಾರಣ. ಶಾಲೆಯಲ್ಲಿನ ಅತ್ಯುತ್ತಮವಾದ ಬೋಧನೆ, ನಿರಂತರವಾಗಿ ನಡೆಸುತ್ತಿದ್ದ ಪೂರ್ವ ತಯಾರಿ ಪರೀಕ್ಷೆಗಳು, ಪರೀಕ್ಷಾ ಸಮಯದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಗಾರಗಳು, ಸಹಪಠ್ಯ ಚಟುವಟಿಕೆಗಳು ತುಂಬಾ ಸಹಾಯವಾಗಿವೆ. ಎಂದಿದ್ದಾಳೆ. ಹಾಸ್ಟೆಲ್ ನ ವಿದ್ಯಾರ್ಥಿನಿಯಾಗಿದ್ದು ಹಾಸ್ಟೆಲ್ ನ ಸ್ಟಡಿ ಅವರ್ಸ್, ಹಾಸ್ಟೆಲ್ ಶಿಕ್ಷಕರು, ಹಾಸ್ಟೆಲ್ ವಾರ್ಡನ್ ಎಲ್ಲರ ಸಹಕಾರ ದೊರಕಿದೆ. ಶಾಲೆಯಲ್ಲಿ ಆರನೇ ತರಗತಿಯಿಂದಲೇ ಬೋಧಿಸುತ್ತಿರುವ ಐಐಟಿ / ನೀಟ್ ಫೌಂಡೇಶನ್ ಕೋರ್ಸ್ ನ ಮಾಸಿಕ ಪರೀಕ್ಷೆಗಳು ಜಟಿಲವಾದ ಪ್ರಶ್ನೆಗಳನ್ನು ಸರಳವಾಗಿ ಉತ್ತರಿಸಲು ನೆರವಾಯಿತು. ಮುಂದೆ ವೈದ್ಯೆಯಾಗಿ ಜನರ ಸೇವೆ ಮಾಡುವ ಆಸೆ ಇದೆ. ಪಿಯುಸಿ ಶಿಕ್ಷಣವನ್ನು ನಮ್ಮದೇ ಸುಜ್ಞಾನ ಪಿಯು ಕಾಲೇಜಿನಲ್ಲಿ ಮುಂದುವರಿಸುತ್ತೇನೆ ಎಂದಿದ್ದಾಳೆ.


ಪ್ರಾವ್ಯ ಪಿ ಶೆಟ್ಟಿ ಸಾಧನೆಯನ್ನು ಅಭಿನಂದಿಸಿದ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರ ಪ್ರಯತ್ನವನ್ನು ಶ್ಲಾಘಿಸಿದರು. ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ಅವರು ಅಭಿನಂದಿಸಿದರು.