ಗಂಗೊಳ್ಳಿಯಲ್ಲಿ ಲೈಟ್ ಫಿಶಿಂಗ್ : ಮೂರು ಬೋಟುಗಳಿಗೆ ದಂಡ
ಕುಂದಾಪುರ: ನಿಯಮ ಮೀರಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಮೂರು ಬೋಟುಗಳಿಗೆ ದಂಡ ವಿಧಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಸಮುದ್ರದಲ್ಲಿ ಈ ಬೋಟುಗಳು ಅವೈಜ್ಞಾನಿಕವಾಗಿ ಲೈಟ್ ಮೀನುಗಾರಿಕೆ ನಡೆಸುತ್ತಿದ್ದವು ಎನ್ನಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕಾರ್ಯಾಚರಣೆ ಮಾಡಿ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು ಮೂರು ಬೋಟುಗಳ ಮಾಲಕರಿಗೆ ಒಟ್ಟು 16 ಸಾವಿರ ರೂ. ದಂಡ ವಿಧಿಸಿದ್ದಾರೆ.

ಮತ್ತೊಂದು ಬೋಟ್‌ನಲ್ಲಿ ಬೆಳಕು ಮೀನುಗಾರಿಕೆ ನಡೆಸಲು ಜನರೇಟರ್‌ಅಳವಡಿಸಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಅವರಿಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಬೋಟ್ ಅನ್ನು ಬಿಡುಗಡೆಗೊಳಿಸುವ ಮುನ್ನ ಬೋಟುಗಳಲ್ಲಿ ಅಳವಡಿಸಿದ ಜನರೇಟರ್ ಹಾಗೂ ಬೆಳಕು ಮೀನುಗಾರಿಕೆಗೆ ಸಂಬಂಧಿಸಿದ ಲೈಟಿಂಗ್ ಉಪಕರಣಗಳನ್ನು ತೆರವುಗೊಳಿಸಲಾಗಿದೆ.
ನಿಷೇಧಿತ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್‌ಗಳನ್ನು ತಡೆಯಲು ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ವತಿಯಿಂದ ಜಂಟಿಯಾಗಿ ಫೈಯಿಂಗ್ ಸ್ಕ್ಯಾಡ್ ರಚಿಸಲಾಗಿದೆ. ಈ ತಂಡವು ಮಲ್ಪೆ ಹಾಗೂ ಗಂಗೊಳ್ಳಿ ಬಂದರಿನಲ್ಲಿ ನಿರಂತರ ತಪಾಸಣೆ ನಡೆಸುತ್ತಿದೆ.