ಗುಂಡ್ಮಿ: ಕರುವಿನ ಬಾಲ ಕಡಿದ ಪ್ರಕರಣಕ್ಕೆ ತಿರುವು – ಸುಳ್ಳು ಸುದ್ಧಿ ಹರಡಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸ್

ಕುಂದಾಪುರ: ಬ್ರಹ್ಮಾವರದ ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ನಾಗೇಶ ರವರ ಮನೆಯ ದನದ ಕರುವಿನ ಬಾಲದ ತುದಿಯನ್ನು ಯಾರೋ ಮತಾಂದರು ಕತ್ತರಿಸಿ ಹೋಗಿರುವ ಬಗ್ಗೆ ಮೇಸೆಜ್ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಕೋಟ ಎಸೈ ರಾಘವೇಂದ್ರ ಸಿ ಅವರು ಪೊಲೀಸ್ ಬ್ಲಾಗ್ ಮೂಲಕ ತಿಳಿಸಿದ್ದು, ವಿಚಾರವನ್ನು ತಿರುಚಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಜಾನುವಾರು ಬಾಲ ಕಡಿದ ಸುದ್ಧಿ ನಿನ್ನೆ ಎಲ್ಲಾ ಮಾಧ್ಯಮಗಳಲ್ಲಿ ಹರಿದಾಡಿ, ರಾಜ್ಯ ಮಟ್ಟದ ಸುದ್ಧಿಯಾಗಿತ್ತು. ಅಲ್ಲದೇ ಹಿಂದೂ ಸಂಘಟನೆಗಳು ಈ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಸುದ್ಧಿಯಿಂದಾಗಿ ಕೋಟ ಪೊಲೀಸರು ಮತ್ತು ಉಡುಪಿ ಎಸ್ಪಿಗೆ ರಾತ್ರಿ ನಿದ್ರೆ ಇಲ್ಲದಂತಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಕೋಟ ಎಸೈ ರಾಘವೇಂದ್ರ ಸ್ಥಳಕ್ಕೆ ಬೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡಾಗ ಸುಳ್ಳು ಸುದ್ಧಿ ಹರಿದಾಡಿರುವುದು ಬೆಳಕಿಗೆ ಬಂದಿದೆ. ಜನವರಿ 28ರಂದು ಮಧ್ಯಾಹ್ನ 2 ಗಂಟೆಗೆ ಮನೆಯ ಮಾಲಕ ನಾಗೇಶ ಹಾಗೂ ಅವರ ಹೆಂಡತಿ ಅಹಲ್ಯ ಮನೆಯಲ್ಲಿರುವಾಗ ಸುಮಾರು 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಧನ ಸಹಾಯ ಮಾಡುವಂತೆ ಅವರ ಮನೆಗೆ ಬಂದಿದ್ದರು. ಆದರೆ ಮನೆಯ ಮಾಲೀಕರು ಹಣ ಕೊಡದೇ ಇದ್ದಾಗ ಆ ವ್ಯಕ್ತಿಯು ಅಲ್ಲಿಂದ ವಾಪಾಸು ಹೋಗಿದ್ದಾನೆ. ಬಳಿಕ ಅದೇ ದಿನ ಸಂಜೆ 4 ಗಂಟೆಗೆ ನಾಗೇಶರವರು ದನದ ಹಾಲು ಕರೆಯಲು ಕೊಟ್ಟಿಗೆಗೆ(ಹಟ್ಟಿ) ಹೋದಾಗ ದನ ನಿಂತುಕೊಂಡಿದ್ದು, ಕರು ಮಲಗಿತ್ತು. ಮಲಗಿದ್ದ ಕರುವಿನ ಬಾಲದ ಮೇಲೆ ದನದ ಕಾಲು ಇದ್ದು ಕರುವು ಎದ್ದಾಗ ಬಾಲ ತುಂಡಾಗಿ ಬಿದ್ದಿದೆ. ಇದೇ ವಿಚಾರವನ್ನು ಅದೇ ದಿನ ರಾತ್ರಿ ಸಮಯ ಸುಮಾರು 8 ಗಂಟೆಗೆ ನಾಗೇಶ ಅವರು ತಮ್ಮ ಮಗ ಅನಿಲ ಎಂಬುವರಿಗೆ ತಿಳಿಸಿದ್ದಾರೆ. ಅನಿಲ್ ಹಾಗೂ ಆತನ ಸ್ನೇಹಿತರು ಈ ವಿಷಯವನ್ನು ತಿರುಚಿ ಯಾರೋ ಮತಾಂಧ ಸೇಲ್ಸ್ ಮೆನ್ ತಮ್ಮ ಮನೆಗೆ ಮಧ್ಯಾಹ್ನ ಬಂದು ದನದ ಕರುವಿನ ಬಾಲವನ್ನು ಕತ್ತರಿಸಿರುವುದಾಗಿ ಸುದ್ದಿಯನ್ನು ಹಬ್ಬಿಸಿದ್ದು, ಕರುವಿನ ತುಂಡಾದ ಬಾಲದ ಪೋಟೋವನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಕಳುಹಿಸಿದ್ದಾರೆ ಎಂಬುದಾಗಿ ಪೊಲೀಸರಿಗೆ ತಿಳಿದು ಬಂದಿದೆ. ಅನಿಲ್ ಮತ್ತು ಇತರರು ವಾಸ್ತವಿಕ ಸಂಗತಿಗಳನ್ನು ತಿರುಚಿ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡುವುದಕ್ಕೆ ಮತ್ತು ಆತಂಕದ ವಾತಾವರಣ ನಿರ್ಮಾಣ ಆಗುವಂತೆ ಸುಳ್ಳು ಸುದ್ದಿ ಸೃಷ್ಟಿಸಿ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ ಮಾಡಿ, ಸಮಾಜದಲ್ಲಿ ಗುಂಪುಗಳ ನಡುವೆ ದ್ವೇಷ ಹುಟ್ಟಿಸಿ ಅಶಾಂತಿ ನಿರ್ಮಾಣ ಮಾಡುವಂತೆ ಮಾಡಿರುತ್ತಾರೆ ಎಂಬುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
