ಮಮ್ತಾಜ್ ಅಲಿ ಆತ್ಮಹತ್ಯೆ – ಸುಪ್ರೀಂ ಮೆಟ್ಟಿಲೇರಿದ ಕುಟುಂಬಸ್ಥರು
ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ, ಉಧ್ಯಮಿ ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಮುಮ್ತಾಜ್ ಆಲಿ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2025 ಜನವರಿ 9 ರ ವರೆಗೆ ಮುಂದೂಡಿದೆ.

ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿ ಮುಮ್ತಾಝ್ ಅಲಿಯನ್ನು ಆತ್ಮಹತ್ಯೆಗೈಯ್ಯುವಂತೆ ಮಾಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಆಯೇಷಾ, ಗಂಡ ಶೋಹೆಬ್, ಅಬ್ದುಲ್ ಸತ್ತಾರ್ ಸಹಿತ ಇತರರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಸುಪ್ರೀಂ ಆದೇಶದಿಂದ ಆರೋಪಿಗಳ ನ್ಯಾಯಾಂಗ ಬಂಧನವು ಜನವರಿ 9ರ ವರೆಗೆ ಮುಂದುವರಿಯಲಿದೆ.
ಆರೋಪಿತರ ಪರ ವಕೀಲರು 60 ದಿನಗಳ ಒಳಗಾಗಿ ಪೊಲೀಸರು ಚಾರ್ಜ್ ಶೀಟ್ ಹಾಕದೇ ಇರುವುದರಿಂದ ಜಾಮೀನು ನೀಡಲು ಅವಕಾಶವಿದ್ದು, ಜಾಮೀನು ಮಂಜೂರು ಮಾಡಬೇಕೇಂದು ವಾದಿಸಿದ್ದರು. ವಾದ ಆಲಿಸಿದ್ದ ಸ್ಥಳೀಯ ಹಾಗೂ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡುವ ಸಾಧ್ಯತೆ ಇತ್ತು. ಆದರೆ ಮುಮ್ತಾಜ್ ಆಲಿ ಕುಟುಂಬಸ್ಥರ ಪರ ವಕೀಲ ಪಿ.ಪಿ.ಹೆಗ್ಡೆ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಭಾರತೀಯ ನ್ಯಾಯ ಸಂಹಿತೆಯ ನೂತನ ಕಾಯ್ದೆಯ ಅನ್ವಯ 90 ದಿನಗಳ ಕಾಲಾವಕಾಶ ಇದೆ. ಹೀಗಾಗಿ ಮಾನ್ಯ ಮಾಡಬಾರದು ಎಂದು ವಾದಿಸಿದ್ದು, ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ಅರ್ಜಿ ವಾದವನ್ನು ಜ. 9ರ ವರೆಗೆ ಮುಂದೂಡಿ ಭಾರತೀಯ ನ್ಯಾಯ ಸಂಹಿತೆಯ ಹೊಸ ಕಾನೂನಿನಂತೆ ನೀಡಬೇಕೆ ಅಥವಾ ಈ ಹಿಂದಿನ ಕಾನೂನು ಮಾನ್ಯವೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.
