BlogEconomyFashionHighlightsHuman storiesLifestyleLocal newsOthersTop StoriesTrending

ಕುಂದಾಪುರ: ವಾಣಿಜ್ಯ ಬ್ಯಾಂಕುಗಳು ಸಂಕುಚಿತಗೊಂಡರೆ ಸಹಕಾರಿ ಸಂಸ್ಥೆಗಳು ವಿಕಸನಗೊಳ್ಳುತ್ತಿವೆ – ಎಂ.ಎನ್.ಆರ್.

Aware others:

ಕುಂದಾಪುರ : ಅತೀ ಹೆಚ್ಚು ವಾಣಿಜ್ಯ ಬ್ಯಾಂಕ್ ಗಳನ್ನು ರಾಷ್ಟ್ರಕ್ಕೆ ನೀಡಿದ್ದ ಕೀರ್ತಿ ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್ ಗಳು ದಿನದಿಂದ ದಿನಕ್ಕೆ ಸಂಕುಚಿತಗೊಳ್ಳುತ್ತಿದ್ದು, ಸಹಕಾರಿ ಬ್ಯಾಂಕ್ ಗಳು ವಿಕಸನ ಹೊಂದುತ್ತಿವೆ ಎಂದು ಮಂಗಳೂರಿನ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ ಹೇಳಿದ್ದಾರೆ. ಅವರು ಕೋಟೇಶ್ವರದ ಸಹನಾ ಕನ್ವೆನ್ಶನ್ ಸೆಂಟರ್ನಲ್ಲಿ ಭಾನುವಾರ ನಡೆದ ರೋಜರಿ ಕ್ರಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಕುಂದಾಪುರ ಇದರ 1,000 ಕೋಟಿ ವ್ಯವಹಾರದ ಸಂಭ್ರಮದಲ್ಲಿ ಸಂಸ್ಥೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಸ್ಥೆಗಳನ್ನು ಕಟ್ಟುವುದು ಸುಲಭ. ನಂತರದಲ್ಲಿ ಅದನ್ನು ಸುದೃಢವಾಗಿ ಬೆಳೆಸುವುದು ಕಷ್ಟ. 32 ವರ್ಷಗಳ ಕಾಲ ಕಪ್ಪು ಚುಕ್ಕಿ ಬಾರದಂತೆ ರೋಜರಿ ಕ್ರಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಬೆಳೆಸುವಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ನಿಸ್ವಾರ್ಥವಾದ ಪ್ರಾಮಾಣಿಕ ಪ್ರಯತ್ನ ಇದೆ ಎಂದ ಅವರು, ಇಲ್ಲಿನ ಇತಿಹಾಸದೊಂದಿಗೆ ಬೇಸುಗೆಯನ್ನು ಹೊಂದಿದ್ದ ಪ್ರಮುಖ ವಾಣಿಜ್ಯ ಬ್ಯಾಂಕ್ ಗಳು ಬೇರೆ ಬ್ಯಾಂಕ್ ಗಳೊಂದಿಗೆ ಸೇರ್ಪಡೆಯಾಗುವ ಮೂಲಕ ಜನರ ಮನಸ್ಸಿನಿಂದ ಭಾವನಾತ್ಮಕವಾಗಿ ದೂರವಾಗಿದೆ. ಸ್ಥಳೀಯರ ಜಾಗದಲ್ಲಿ ಭಾಷೆ ಹಾಗೂ ಸಂಸ್ಕೃತಿಯ ಪರಿಚಯವಿಲ್ಲದ ಅನ್ಯ ಭಾಷಿಕರು ಬಂದು ಕುಳಿತಿರುವುದರಿಂದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸುವುದು ಕಷ್ಟವಾಗುತ್ತಿದೆ.. ಗುರಿ ದೊಡ್ಡದಿದ್ದಾಗ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತದೆ. ರೋಜರಿ ಬ್ಯಾಂಕಿಗೆ 50 ವರ್ಷ ತುಂಬುವಾಗ 1,000 ಕೋಟಿ ಠೇವಣೆ ಹಾಗೂ ಸಾಕಷ್ಟು ಶಾಖೆಗಳ ಗುರಿಯನ್ನು ಇರಿಸಿಕೊಳ್ಳಬೇಕು. ಸೇವಾಪರರಾದ ಹಾಗೂ ಶಾಂತಿ ಪ್ರೀಯರಾದ ಕ್ರೈಸ್ತ ಬಂಧುಗಳು, ತಮ್ಮ ದುಡಿಮೆಯ ಉಳಿತಾಯವನ್ನು ಈ ಸಂಸ್ಥೆಯಲ್ಲಿ ಇಡುವ ಮೂಲಕ ಸಂಸ್ಥೆಯ ದ್ಯೇಯೋದ್ದೇಶಗಳನ್ನು ಈಡೇರಿಸಲು ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ, ಉಡುಪಿ ಧರ್ಮ ಪ್ರಾಂತ್ಯದ ಶ್ರೇಷ್ಠ ಧರ್ಮಗುರು ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು, ಒಂದು ಸಾವಿರ ಕೋಟಿ ವ್ಯವಹಾರ ನಡೆಸುವುದು ಸಂಸ್ಥೆಯ ಸಾಧನೆಯ ಮೈಲುಗಲ್ಲಿನ ಪ್ರಮುಖ ಭಾಗವಾಗಿದೆ. ಸಹಕಾರಿ ಸಂಸ್ಥೆಗಳು ಪ್ರಗತಿ ಹೊಂದಿದಾಗ ಸಾಮಾನ್ಯ ಜನರ ಬದುಕಿನ ಆಶಾಕಿರಣಗಳು ಅದರಲ್ಲಿ ಸ್ವಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಕಳೆದ 10 ವರ್ಷಗಳಿಂದ ಅಧ್ಯಕ್ಷರಾಗಿ ಸಂಸ್ಥೆಯ ಪ್ರಗತಿಯ ಗುರಿ ಮುಟ್ಟಿಸುವಲ್ಲಿ ದುಡಿಯುತ್ತಿರುವ ಅಧ್ಯಕ್ಷ ಜೋನ್ಸ್ನ್ ಡಿ ಆಲ್ಮೇಡಾ ಅವರ ಅವಧಿ ಅಭಿವೃದ್ಧಿಯ ಕ್ರಾಂತಿಯ ಅವಧಿ ಎಂದು ಪರಿಗಣಿಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂದಾಪುರ ರೋಮನ್ ಕ್ರೈಸ್ತ್ ವಲಯದ ಧರ್ಮಗುರುಗಳಾದ ಪಾವ್ಲ್ ರೇಗೊ ಅವರು, ನಾನು ದೇವರ ಸೇವಕ ಮಾತ್ರ. ಧರ್ಮಗುರುವಾಗಿ ದೇವರ ಸೇವೆಯನ್ನು ಮಾಡುವಂತೆ ದೇವರು ನನಗೆ ಆಶೀರ್ವದಿಸಿದಂತೆ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಬ್ಯಾಂಕ್ ಗಳ ಜತೆಯಲ್ಲಿ ಪೈಪೋಟಿ ನಡೆಸಿ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಅತ್ಯಂತ ಶ್ರಮದಾಯಕ. ಕೇವಲ ಯಾಂತ್ರಿಕ ಸಂಬಂಧಗಳನ್ನು ಹೊಂದಿರುವ ವಾಣಿಜ್ಯ ಬ್ಯಾಂಕ್ ಗಳ ಬದಲಿಗೆ ಅಂತ:ಕರಣ, ಅಕ್ಕರೆ ಹಾಗೂ ಸಾಂತ್ವನ ಇರುವ ಸೇವೆ ಕೇವಲ ಸಹಕಾರಿ ಸಂಸ್ಥೆಗಳಲ್ಲಿ ದೊರಕುತ್ತಿದೆ ಎಂದರು.

ರೋಜರಿ ಕ್ರಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಕುಂದಾಪುರ ಇದರ ಅಧ್ಯಕ್ಷ ಜೋನ್ಸ್ನ ಡಿ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್, ಪತ್ರಕರ್ತ ವಾಲ್ಟರ್ ಡಿಸೋಜಾ ನಂದಳಿಕೆ ಮಾತನಾಡಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಅನಿವಾಸಿ ಭಾರತೀಯ ಫಿಲಾಥ್ರೋಪಿಸ್ಟ್ ಡಾ.ರೋನಾಲ್ಡ್ ಕುಲಾಸೊ ಅವರ ಸಂದೇಶಗಳನ್ನು ಭಿತ್ತರಿಸಲಾಯಿತು. ಸಾಧಕರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಸ್ಥೆಯಿಂದ ಐದು ವಲಯಗಳ ಫಲನುಭವಿಗಳಿಗೆ ನೀಡಲಿರುವ ಮನೆಗಳ ಪ್ರತಿಕ್ರತಿಯ ಅನಾವರಣ ನಡೆಯಿತು. ರೋಜರಿ ಕ್ರಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಕುಂದಾಪುರ ಇದರ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು, ನಿರ್ದೇಶಕ ವಿಲ್ಸನ್ ಡಿಸೋಜಾ ಶಿರ್ವ ವಂದಿಸಿದರು, ಆಲ್ವಿನ್ ದಾಂತಿ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!