ಹಟ್ಟಿಯಂಗಡಿ: ಸಿದ್ಧಿವಿನಾಯಕ ಶಾಲೆಯಲ್ಲಿ ಸತೀಶ್ ಹೆಮ್ಮಾಡಿಯ ಭ್ರಮಾಲೋಕ
ಕುಂದಾಪುರ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆ ಜೊತೆಯಲ್ಲಿ ಕಲೆ, ಸಾಹಿತ್ಯ, ಕೌಶಲ್ಯಗಳತ್ತಲೂ ವಿಶೇಷ ಆದ್ಯತೆ ನೀಡುವ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಜಾದೂ ಪ್ರದರ್ಶನವನ್ನು ಏರ್ಪಡಿಸಲಾಯಿತು. ಖ್ಯಾತ ಜಾದೂಗಾರ ಸತೀಶ್ ಹೆಮ್ಮಾಡಿಯವರ ಭ್ರಮಾಲೋಕ ತಂಡವು ವಿಭಿನ್ನ ಜಾದೂ ಕೈಚಳಕಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿತು.

ಈ ಸಂದರ್ಭ ಮಾತನಾಡಿದ ಸತೀಶ್ ಹೆಮ್ಮಾಡಿ, ಜಾದೂ ಎಂಬುದು ಮಾಯೆಯೂ ಅಲ್ಲ, ಭ್ರಮೆಯೂ ಅಲ್ಲ. ಅದೊಂದು ವಿಜ್ಞಾನಾಧಾರಿತ ಕೈಚಳಕ. ನಿರಂತರ ಅಭ್ಯಾಸದಿಂದ ಮಾತ್ರವೇ ಈ ಕಲೆಯಲ್ಲಿ ಪರಿಣತಿ ಹೊಂದಲು ಸಾಧ್ಯ. ಈ ಅಭ್ಯಾಸದಿಂದ ಮನಸ್ಸು ಮತ್ತು ಇಂದ್ರಿಯಗಳು ಚುರುಕಾಗುವುದರೊಂದಿಗೆ ಬುದ್ಧಿಶಕ್ತಿಯ ವೃದ್ಧಿಯಾಗುತ್ತದೆ ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ, ಶಾಲಾ ಉಪ ಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಶಿಕ್ಷಕಿ ಸುಮಲತಾ ಜೋಗಿ ಸ್ವಾಗತಿಸಿ, ವಂದಿಸಿದರು.
