ಬೈಂದೂರು: ರೈಲು ನಿಲ್ದಾಣ ಮೇಲ್ದರ್ಜೆಗೆ ಪ್ರವಾಸೋದ್ಯಮ ಸಚಿವರಿಗೆ ಸಂಸದ ರಾಘವೇಂದ್ರ ಮನವಿ
ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಹಾಗೂ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣ ಅಭಿವೃದ್ದಿ ಮಾಡುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಬಿ. ವೈ.ರಾಘವೇಂದ್ರ ಮನವಿ ಮಾಡಿದರು.
ಆಗಸ್ಟ್ 2ರಂದು ಸಚಿವರನ್ನು ಭೇಟಿ ಮಾಡಿದ ಸಂಸದ ಬಿ.ವೈ.ಆರ್., ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶ್ರೀ ಮೂಕಾಂಬಿಕಾ ದೇವಿಗೆ ಸಮರ್ಪಿತವಾದ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪ್ರಾಚೀನ ಕಾಲದ ಶ್ರೀಮಂತ ಪರಂಪರೆಯೊಂದಿಗೆ ಪೂಜ್ಯ ಯಾತ್ರಾ ಸ್ಥಳವಾಗಿದ್ದು, ಈ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ ಎಂದರು. ಭಾರತ ಹಾಗೂ ಹೊರ ದೇಶದ ಮಾಜಿ ರಾಷ್ಟ್ರಪತಿಗಳು, ಪ್ರಧಾನಿ ಮುಂತಾದ ವಿವಿಧ ಹಿರಿಯ ವ್ಯಕ್ತಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಾಂಸ್ಕೃತಿಕ ಶ್ರೀಮಂತಿಕೆಯ ಹೊರತಾಗಿಯೂ, ಕೊಲ್ಲೂರು ತನ್ನ ಸಂಭಾವ್ಯ ಯಾತ್ರಾರ್ಥಿಗಳಿಗೆ ಸಾಕಾಗುವಷ್ಟು ಮೂಲಸೌಕರ್ಯವನ್ನು ಹೊಂದಿಲ್ಲದಿರುವುದನ್ನು ಮನವರಿಕೆ ಮಾಡಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಇತಿಹಾಸ, ಧಾರ್ಮಿಕ ಹಾಗೂ ಸಾಂಕೃತಿಕ ಪರಂಪರೆ ಉಳಿಸಿಕೊಂಡು ಸಮಗ್ರ ಅಭಿವೃದ್ದಿಯಿಂದ ಯಾತ್ರಿಕರು ಮತ್ತು ಭಕ್ತಾಧಿಗಳಿಗೆ ಸುಧಾರಿತ ಸೌಲಭ್ಯಗಳು ಮತ್ತು ಸೇವೆಗಳನ್ನು ನೀಡಲು ಯೋಜನೆ ರೂಪಿಸಲು ಹಾಗೂ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣವನ್ನು ಭಕ್ತಾಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರೂ 14.75 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲು ಸಚಿವರಲ್ಲಿ ಮನವಿ ಮಾಡಲಾಯಿತು. ಸಂಸದ ರಾಘವೇಂದ್ರ ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
