ಕಂಡ್ಲೂರು: ಹೊಳೆಗೆ ಹಾರಿ ನಾಪತ್ತೆಯಾತ ಹೇರಿಕುದ್ರು ಹೊಳೆಯಲ್ಲಿ ಶವವಾಗಿ ಪತ್ತೆ
ಕುಂದಾಪುರ: ಗಂಡ ಹೆಂಡಿರ ಜಗಳದ ಬಳಿಕ ಪೊಲೀಸ್ ಠಾಣೆಯ ಮೆಟ್ಟಿಲೇರಿ ವಾಪಾಸ್ಸು ಬರುತ್ತಿದ್ದಾಗ ವಾರಾಹಿ ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಪತಿ ಹರೀಶನ ಮೃತದೇಹವನ್ನು ಹೇರಿಕುದ್ರು ಎಂಬಲ್ಲಿ ಪತ್ತೆ ಹಚ್ಚಲಾಗಿದೆ.

ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದ್ದು ಮೂರು ದಿನಗಳ ಬಳಿಕ ಹರೀಶ ಶವವಾಗಿ ಪತ್ತೆಯಾಗಿದ್ದಾನೆ. ಹರೀಶ ನಾಪತ್ತೆಯಾದ ಸುದ್ಧಿ ತಿಳಿದ ಬಳಿಕ ಕುಂದಾಪುರದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟಿನಲ್ಲಿ, ಸ್ಥಳೀಯ ಶೌರ್ಯ ತಂಡದ ಸದಸ್ಯರು, ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಂಡ್ಲೂರಿನಿಂದ ಗುಲ್ವಾಡಿ, ಬಸೂರು, ಆನಗಳ್ಳಿ, ಸಂಗಮ್ ಸೇತುವೆಯವರೆಗೂ ಹುಡುಕಲಾಗಿತ್ತು.
ಇಂದು ಮಧ್ಯಾಹ್ನ 3.30ರ ಸುಮಾರಿಗೆ ಶೌರ್ಯ ತಂಡ ಹುಡುಕಾಟ ನಡೆಸುತ್ತಿದ್ದ ವೇಳೆ ಹರೀಶ ಮೃತದೇಹ ಹುಡುಕಾಟದ ವೇಳೆ ಪತ್ತೆಯಾಗಿದೆ. ಮೃತದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಸಂಜೆ ವೇಳೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ ಗೌಡ ಭೇಟಿ ನೀಡಿದರು. ಕಂಡೂರು ಠಾಣಾ ಎಸ್‌ಐ ನೂತನ್ ಹಾಗೂ ಸಿಬ್ಬಂದಿ ಹುಡುಕಾಟ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
