ತ್ರಾಸಿ: ರಾಹುಲ್ ಗಾಂಧಿ ಹಿಂದೂಗಳ ಕ್ಷೆಮೆ ಕೇಳಲಿ : ಬಿಜೆಪಿಯಿಂದ ಪ್ರತಿಭಟನೆ

ತ್ರಾಸಿ: ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಅಧಿವೇಶನದಲ್ಲಿ ಬಹಿರಂಗವಾಗಿ ಹಿಂದು ವಿರೋಧಿ ಹೇಳಿಕೆಗಳನ್ನು ನೀಡಿ, ಹಿಂದುಗಳನ್ನು ಅವಮಾನಿಸಿ ಹಿಂದುಗಳ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಹಿಂದುಗಳ ಕ್ಷಮೆ ಕೇಳಬೇಕು. ಇಂತಹ ಹೇಳಿಕೆಗಳನ್ನು ನೀಡಿದ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಆಗ್ರಹಿಸಿದರು. ಬಿಜೆಪಿ ಬೈಂದೂರು ಮಂಡಲ ಯುವಮೋರ್ಚಾ ವತಿಯಿಂದ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ತ್ರಾಸಿ ಜಂಕ್ಷನ್‍ನಲ್ಲಿ ಬುಧವಾರ ಸಂಜೆ ಕರೆಯಲಾದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಗೆದ್ದಿದೆ. ವಾಲ್ಮೀಕಿ ನಿಗಮದಲ್ಲಿ ಸುಮಾರು 187 ಕೋಟಿ ರೂ. ಹಗರಣ, ಮುಡಾ ಹಗರಣ ಸೇರಿದಂತೆ ಅನೇಕ ಹಗರಣಗಳನ್ನು ನಡೆಸಿ ಹಣವನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇಡೀ ಜಗತ್ತು ಸನಾತನ ಹಿಂದು ಧರ್ಮದ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟಿರುವಾಗ, ಡೋಂಗಿ ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿಂದು ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಿಂದಿನಿಂದಲೂ ಹಿಂದುಗಳ ವಿರುದ್ಧ ದ್ವೇಷ ಕಾರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ದೇಶದ ಹಿಂದುಗಳ ಕ್ಷಮೆಯಾಚಿಸಬೇಕು ಎಂದರು.

ಬೈಂದೂರು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಮತ್ತು ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುಧಾಕರ ಶೆಟ್ಟಿ ನೆಲ್ಯಾಡಿ ಮಾತನಾಡಿದರು. ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಬಿಜೂರು, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್, ಮುಖಂಡರಾದ ಉಮೇಶ ಮೇಸ್ತ, ಹರೀಶ ಮೇಸ್ತ, ಪ್ರೇಮಾ ಪೂಜಾರಿ, ಶಾಂತಿ ಖಾರ್ವಿ, ಶೋಭಾ ಜಿ.ಪುತ್ರನ್, ಅನಿತಾ ಆರ್.ಕೆ., ರಾಘವೇಂದ್ರ ನೆಂಪು, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ಖಾರ್ವಿ, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
