ಬೈಂದೂರು: ಶಾಸಕರಿಂದ ಪ್ರಗತಿ ಪರಿಶೀಲನೆ – ಸಮನ್ವಯದಿಂದ ಸೇವೆ ಸಲ್ಲಿಸಿ ಗುರುರಾಜ್ ಸಲಹೆ
ಬೈಂದೂರು: ಬಾಕಿ ಇರುವ ಕಡತಗಳನ್ನು ತಕ್ಷಣ ವಿಲೇವಾರಿಗೊಳಿಸಿ. ಅಧಿಕಾರಿಗಳು ಸಮನ್ವಯದಿಂದ ಕೆಲಸಮಾಡಿದರೆ ಜನಸಾಮನ್ಯರ ಸಮಸ್ಯೆಗಳಿಗೆ ಪರಿಹಾರ ಸುಲಭ ಸಾಧ್ಯ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಉಪ್ಪುಂದದ ಕಾರ್ಯಕರ್ತ ಕಛೇರಿಯಲ್ಲಿ ಆರೋಗ್ಯ & ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ಕಂದಾಯ & ಸರ್ವೇ ಇಲಾಖೆ ಹಾಗೂ ಬಿಎಸ್ಎನ್ಎಲ್ ಮತ್ತು ಕೆಪಿಸಿಎಲ್ ಇಲಾಖೆ ಪ್ರಗತಿ ಪರಿಶೀಲನೆ, ಬಾಕಿ ಇರುವ ಕಡತಗಳ ವಿಲೇವಾರಿ ಕುರಿತಾದ ಜಂಟಿ ಇಲಾಖಾ ಸಭೆ ನಡೆಸಿ ಈ ಸೂಚನೆ ನೀಡಿದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದ ಶಾಸಕರು, ಸಾರ್ವಜನಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ ಎಂದು ಸಲಹೆ ನೀಡಿದರು. ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು, ಆಸ್ಪತ್ರೆಗೆ ಅಗತ್ಯ ಕಟ್ಟಡ ವ್ಯವಸ್ಥೆ ಮಾಡಿಸುವುದು, ಕಟ್ಟಡಕ್ಕೆ ಬೇಕಾದ ಜಾಗ ಗುರುತಿಸುವುದು ಇತ್ಯಾದಿಗಳನ್ನು ತ್ವರಿತವಾಗಿ ಮಾಡಬೇಕು ಎಂದರು.

ನಾಡ ಬಿ ಹಾಗೂ ಹೇರೂರುವಿನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಮಂಜೂರಾಗಿದ್ದು ಪ್ರತಿ ಕೇಂದ್ರಕ್ಕೆ 65 ಲಕ್ಷ ಅನುದಾನ ಬಿಡುಗಡೆ ಆಗಿರುತ್ತದೆ. ಸದರಿ ಕೇಂದ್ರಗಳಿಗೆ ಕೂಡಲೇ ನಿವೇಶನ ಒದಗಿಸಬೇಕು. ಕ್ಷೇತ್ರಕ್ಕೆ ಎರಡು ನಮ್ಮ ಕ್ಲಿನಿಕ್ ಮಂಜೂರಾಗಿದ್ದು ಸದ್ಯದಲ್ಲೇ ಕಾರ್ಯಾರಂಭ ಮಾಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಕೊಲ್ಲೂರು ಜಡ್ಕಲ್ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಿದ್ದು ಎಚ್ಚರಿಕೆ ವಹಿಸಲು ಅಲ್ಲಿನ ವೈದ್ಯಾಧಿಕಾರಿಗಳು ಮುಂದಾಗಬೇಕು. ಶಿರೂರು, ಕೊಲ್ಲೂರು, ಕಿರಿಮಂಜೇಶ್ವರ, ಆಲೂರು, ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರ ಪ್ರಾರಂಭಿಸಲಾಗಿದ್ದು ಅಗತ್ಯ ಆರೋಗ್ಯ ಸೇವೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ವಿಶೇಷ ಚೇತನರು, ಬೆನ್ನುಹುರಿ ಅಪಘಾತಕ್ಕೆ ಒಳಗದವರ ಬಗ್ಗೆ ವಿಶೇಷ ಕಾಳಜಿ ಇರಬೇಕು. ಕೊರತೆಯಿರುವ ಆಶಾ ಕಾರ್ಯಕರ್ತರ ನೇಮಕಕ್ಕೆ ಸರಕಾರಕ್ಕೆ ಒತ್ತಡ ಹಾಕಲಾಗುವುದು, ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದು, ಪ್ರಸ್ತಾವನೆ ಕಳುಹಿಸುವುದು ಆಗಬೇಕು ಎಂದರು.
ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕ್ಷೇತ್ರ ಮರು ವಿಂಗಡಣೆಗೆ ಸರಕಾರದ ಗಮನ ಸೆಳೆಯಲಾಗುವುದು. ತಾಲೂಕು ಆಸ್ಪತ್ರೆಯಲ್ಲಿ ಡಯಲಿಸಿಸ್ ಘಟಕದ ಆರ್. ಒ. ಪ್ಲಾಂಟ್ ನಿರ್ಮಾಣಕ್ಕೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಲು ಆಯುಕ್ತರಿಗೆ ಮನವಿ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಕ್ಷೇತ್ರದ ನೊಂದವರಿಗೆ ಡಯಾಲಿಸಿಸ್ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಾನಂದ ಶೆಟ್ಟಿ, ಬಿಎಸ್ಎನ್‌ಎಲ್ ಅಧಿಕಾರಿ ಕೃಷ್ಣ, ಶಂಕರನಾರಾಯಣ ವಿಭಾಗದ ಆರ್‌ಎಫ್ಒ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.