ಬೈಂದೂರಿನ ಹಳ್ಳಿಯಲ್ಲಿ ಇನ್ನೂ ಜೀವಂತವಿದೆ ಅಪಾಯಕಾರಿ ಕಾಲು ಸಂಕಗಳು
ಪ್ರಾಣ ಹಾನಿಗೆ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ ಯಂತ್ರ
ಕುಂದಾಪುರ: ರಾಜ್ಯದ ಹಲವು ಗ್ರಾಮೀಣ ತಾಲೂಕುಗಳಲ್ಲಿ ಒಂದಾಗಿರುವ ಬೈಂದೂರು ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಇನ್ನೂ ಜೀವಂತವಾಗಿ ಉಳಿದುಕೊಂಡಿವೆ ಅಪಾಯಕಾರಿ ಕಾಲು ಸಂಕಗಳು. ಮೂಲಭೂತ ಸೌಕರ್ಯ ಸಮಸ್ಯೆಗಳೇ ಹೆಚ್ಚಾಗಿರುವ ಕಾರಣ ಬೈಂದೂರಿಗೆ ಅಪಖ್ಯಾತಿ ಅಂಟಿದೆ. ಅದಕ್ಕೊಂದು ಊದಾಹರಣೆಯಾಗಿ ಕಾಣಸಿಗುವುದೇ ಹಾರ್ಮಣ್ಣು ಬಳಿ ಅಪಾಯಕಾರಿ ಕಾಲುಸಂಕ.

ಬೈಂದೂರು ತಾಲೂಕಿನ ಇಡೂರು ಕುಂಜ್ಞಾಡಿ ಬಲ್ಲಿಗೆ ಹತ್ತಿರವಿರುವ ಹಾರ್ಮಣ್ ಪ್ರದೆಶದ ಜನರಿಗೆ ಮಳೆಗಾಲ ಬಂತೆಂದರೆ ನರಕಯಾತನೆ ಅನುಭವಿಸುವಂತಾಗಿದೆ. ಪ್ರತೀ ವರ್ಷದ ಮಳೆಗಾಲದಲ್ಲಿಯೂ ಇಲ್ಲಿನ ಜನ ಹೊಳೆ ದಾಟಲು ತಾವೇ ನಿರ್ಮಿಸಿಕೊಳ್ಳುವ ಅಪಾಯಕಾರಿ ಕಾಲುಸಂಕ ಲ್ಲಿನ ಜನರಿಗೆ ಮರಣಶಾಸನದಂತಾಗಿದೆ. ಹಾಗಂತ ಈ ಕಾಲು ಸಂಕವೇ ದೈನಂದಿನ ಚಟುವಟಿಕೆಗಳಿಗೆ ಇಲ್ಲಿನ ನಿವಾಸಿಗಳಿಗೆ ಬಹು ಮುಖ್ಯ ಸಂಪರ್ಕ ಸೇತುವೆ. ಪ್ರತಿ ಮಳೆಗಾಲದಲ್ಲೂ ಕೂಡ ಒಂದಲ್ಲ ಒಂದು ಅವಘಡಗಳು ಈ ಕಿರು ಸೇತುವೆಗಳಿಂದ ಆಗುತ್ತಿದೆ. ಆದರೆ ಇದುವರೆಗೆ ಯಾವುದೇ ಸರಕಾರವು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಳೆ ವಿಪರೀತವಾದರಂತೂ ಇಲ್ಲಿನ ಜನ ಪ್ರಾಣಪಣಕ್ಕಿಟ್ಟು ನದಿ ದಾಟಬೇಕಿದೆ.

ಸುಮಾರು 15 ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದಾರೆ. ಬೇರೆ ಯಾವುದೇ ಸಂಪರ್ಕ ರಸ್ತೆ ಇಲ್ಲದೇ ಇರುವುದರಿಂದ ಸೇತುವೆಯೇ ಮಳೆಗಾಲದಲ್ಲಿ ಜನ ಸಂಪರ್ಕ ಕೊಂಡಿಯಾಗಿದೆ. ಪ್ರತಿನಿತ್ಯ ಶಾಲೆಗೆ ತೆರಳುವ ಪುಟ್ಟ, ಮಕ್ಕಳು ಕಾಲೇಜಿಗೆ ತೆರಳುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದೇ ಕಾಲು ಸಂಕದ ಮೂಲಕ ನಗರದಲ್ಲಿರುವ ವಿದ್ಯಾ ಕೇಂದ್ರಗಳಿಗೆ ತೆರಳಬೇಕು. ಈ ಭಾಗದಲ್ಲಿ ಯಾವುದಾದರೂ ಅವಘಡ ಅಥವಾ ಆರೋಗ್ಯ ಸಮಸ್ಯೆ ಕಾಡಿದರೆ ಹೆಗಲ ಮೇಲೆ ಹೊತ್ತುಕೊಂಡು ಈ ಕಿರು ಸೇತುವೆಯ ಮೂಲಕ ತೆರಳಿ ಚಿಕಿತ್ಸಾ ಕೇಂದ್ರಗಳಿಗೆ ತೆರಳಬೇಕಾದ ದುಸ್ಥಿತಿ ಈ ಭಾಗದಲ್ಲಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಇಲ್ಲೊಂದು ಶಾಶ್ವತ ಸೇತುವೆ ನಿರ್ಮಿಸಿಕೊಟ್ಟರಷ್ಟೇ ಇಲ್ಲಿನ ಜನರ ಬದುಕು ಪ್ರಾಣಾಪಾಯದಿಂದ ಪಾರಾಗಬಹುದು.
