ಸೊಸೈಟಿಗೆ ನುಗ್ಗಿದ ಕಳ್ಳ : ಸಿಸಿಟಿವಿ ವೀಕ್ಷಣೆ ಮೂಲಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ!
ಕುಂದಾಪುರ: ಶುಕ್ರವಾರ ತಡರಾತ್ರಿ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳ ಬಂದ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಪರೂಪದ ಘಟನೆ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಹೊಸಾಡು ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದಿದೆ.

ಇಲ್ಲಿನ ಸೊಸೈಟಿಗೆ ಶುಕ್ರವಾರ ರಾತ್ರಿ ಗಂಟೆ 1.45ರ ಸುಮಾರಿಗೆ ಕಳ್ಳನೊಬ್ಬ ಕಿಟಕಿಯ ಸರಳು ಕತ್ತರಿಸಿ ಒಳನುಗ್ಗಿದ್ದಾನೆ. ಆತನ ದುರಾದೃಷ್ಟಕ್ಕೆ ಸೈನ್ ಇನ್ ಸೆಕ್ಯೂರಿಟಿಯ ಸಿಸಿಟಿವಿ ಇದ್ದಿದ್ದರಿಂದ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸೈನ್ ಇನ್ ಸೆಕ್ಯೂರಿಟಿ ಈ ಸೊಸೈಟಿಗೆ ಧ್ವನಿ ಸಹಿತ ಸಿಸಿಟಿವಿ ಅಳವಡಿಸಿದ್ದಲ್ಲದೇ ರಾತ್ರಿ ಹೊತ್ತು ಅದರ ಮಾನಿಟರಿಂಗ್ ನಡೆಸುತ್ತಿತ್ತು. ಶುಕ್ರವಾರ ರಾತ್ರಿ ಕಳ್ಳ ಕಿಟಕಿ ಮುರಿಯುತ್ತಿರುವ ಶಬ್ಧ ಕೇಳಿಸಿಕೊಂಡ ಸೈನ್ ಇನ್ ಸೆಕ್ಯೂರಿಟಿಯ ವೀಕ್ಷಕ ಸಿಬ್ಬಂದಿ ತಕ್ಷಣ ಸಮೀಪದ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭ ಕಳ್ಳ ಸೊಸೈಟಿ ಒಳಗಡೆ ಶೋಧ ನಡೆಸುತ್ತಿರುವುದು ಕಂಡು ಬಂದಿದ್ದು, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈ ಹಿಂದೆ ಯಶೋಧಾ ವಂಟಗೋಡಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಆಗಿದ್ದಾಗ ಸೈನ್ ಇನ್ ಸೆಕ್ಯೂರಿಟಿಯ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡು ಹಲವು ಕಡೆ ಸಿಸಿಟಿವಿ ಅಳವಡಿಸಿ ಮಾನಿಟರಿಂಗ್ ನಡೆಸಲು ಅವಕಾಶ ನೀಡಿತ್ತು. ಇದೀಗ ಎರಡನೇ ಬಾರಿ ಸೈನ್ ಇನ್ ಸೆಕ್ಯೂರಿಟಿಯ ತಂಡದ ಸಿಬ್ಬಂದಿಗಳು ಕಳ್ಳನನ್ನು ಹಿಡಿಯುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಳ್ಳನನ್ನು ಕೇರಳ ಮೂಲದವನೆಂದು ತಿಳಿದು ಬಂದಿದೆ. ಗಮಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
