ಅಜೇಂದ್ರ ಶೆಟ್ಟಿ ಕೊಲೆ ಆರೋಪಿ ಅನೂಪ್ ಶೆಟ್ಟಿ ಜೈಲಿನಲ್ಲಿ ಸಾವು

ಕಂದಾಪುರ: 2021ರ ಜುಲೈ 30ರ ಶುಕ್ರವಾರ ರಾತ್ರಿ ಡ್ರ್ಯಾಗನ್ ನೈಫ್ ನಿಂದ ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿ ಅನೂಪ್ ಶೆಟ್ಟಿ(38) ಶನಿವಾರ ಹಿರಿಯಡಕ ಜೈಲಿನಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.
ಆರೋಪಿ ಅನೂಪ್ ಶೆಟ್ಟಿ ಕಳೆದ ಎರಡೂವರೆ ವರ್ಷಗಳಿಂದ ಹಿರಿಯಡಕದ ಸಬ್ ಜೈಲಿನಲ್ಲಿದ್ದ. ಮೇ11, 2024ರ ಶನಿವಾರ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಜೈಲು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು. ಆದರೆ ದಾರಿ ಮಧ್ಯೆ ಅನೂಪ್ ಶೆಟ್ಟಿ ಮೃತಪಟ್ಟಿರುವುದಾಗಿ ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

2012ರ ಜುಲೈ 30ರಂದು ಶುಕ್ರವಾರ ರಾತ್ರಿ ಕುಂದಾಪುರದ ಕಾಳಾವರ ಗ್ರಾಮದ ಅಸೋಡು ಎಂಬಲ್ಲಿ ಡ್ರೀಮ್ಸ್ ಹಣಕಾಸು ಸಂಸ್ಥೆಯಲ್ಲಿ ಅದರ ಮಾಲೀಕ ಯಡಾಡಿ ಮತ್ಯಾಡಿ ಗ್ರಾಮದ ಕೂಡಾಲು ನಿವಾಸಿ ಜಗನ್ನಾಥ ಶೆಟ್ಟಿ ಎಂಬುವರ ಎರಡನೇ ಪುತ್ರ ಅಜೇಂದ್ರ ಶೆಟ್ಟಿ (35) ಎಂಬಾತನನ್ನು ಅದೇ ಸಂಸ್ಥೆಯ ಪಾಲುದಾರ ಅನೂಪ್ ಶೆಟ್ಟಿ ಬರ್ಬರವಾಗಿ ಕೊಲೆ ಮಾಡಿ ಅಜೇಂದ್ರ ಶೆಟ್ಟಿಯ ಹೊಸ ಕಾರಿನಲ್ಲಿ ಪರಾರಿಯಾಗಿದ್ದ.

ತಪ್ಪಿಸಿಕೊಂಡಿದ್ದ ಅನೂಪ್ ಶೆಟ್ಟಿಯ ಮೊಬೈಲ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಆರೋಪಿ ಅನೂಪ್ ಶೆಟ್ಟಿ ವಿಚಾರಣಾಧೀನ ಕೈದಿಯಾಗಿ ಹಿರಿಯಡಕ ಜೈಲುಪಾಲಾಗಿದ್ದ.
