ಸುಳ್ಯ: ನೆಟ್ಟಾರ್ ಹತ್ಯೆಯ ಆರೋಪಿ ಮುಸ್ತಫಾ ಪೈಚಾರ್ ಬಂಧನ

ಸುಳ್ಯ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ನನ್ನು ಎನ್‌ಐಎ ಅಧಿಕಾರಿಗಳು ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈತ ಸಕಲೇಶಪುರದ ಆನೆಮಹಲ್ ಗ್ರಾಮದ ಸಿರಾಜ್ ಎಂಬುವರ ಬಳಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿರಾಜ್ ಎಂಬವರನ್ನು ಸಹ ಎನ್‌ಐಎ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಜೊತೆಗೆ ಸಿರಾಜ್ ಬಳಿ ಕೆಲಸ ಮಾಡಿಕೊಂಡಿದ್ದ ಮತ್ತೋರ್ವ ವ್ಯಕ್ತಿ ಇಲಿಯಾಸ್ ಎಂಬಾತನನ್ನು ಸಹ ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
2022ರ ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರುವನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಆರೋಪಿ ಮುಸ್ತಫಾ ಬಂಧನಕ್ಕೆ ಎನ್‌ಐಎ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
