ಮೋದಿ ಋಣ ತೀರಿಸಲು ಬಿಜೆಪಿ ಗೆಲ್ಲಿಸಿ : ಅರುಣ್ ಪುತ್ತಿಲ ಕರೆ
ಕುಂದಾಪುರ/ಸಿದ್ದಾಪುರ: ಬಿಜೆಪಿ ನೀಡಿದ್ದ ಆಶ್ವಾಸನೆಗಳಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರದ 370 ವಿಧಿ ರದ್ದತಿ, ಸಿಎಎ ಜಾರಿ ಮಾಡಿದ ಈ ದೇಶ ಕಂಡ ಸದೃಢ ಪ್ರಧಾನಿ ನರೇಂದ್ರ ಮೋದಿಯವರ ಋಣ ತೀರಿಸುವುದು ಈ ದೇಶದ ಪ್ರತಿಯೊಬ್ಬ ಭಾರತೀಯನ ಜವಾಬ್ಧಾರಿಯಾಗಿದೆ. ದೇಶ, ಧರ್ಮದ ಉಳಿವಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಮೂಲಕ ಮೋದಿಯವರ ಋಣ ತೀರಿಸಬೇಕು ಎಂದು ಪುತ್ತೂರಿನ ಹಿಂದೂ ಮುಖಂಡ, ಪುತ್ತಿಲಪರಿವಾರ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.








ಶನಿವಾರ ಸಿದ್ದಾಪುರದಲ್ಲಿ ನಡೆದ ಬಿಜೆಪಿ ರೋಡ್ ಶೋದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮತಾಂಧರ ಪರವಾದ ಸರ್ಕಾರವಿದೆ. ಮಹಿಳೆಯರ ಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಗೋ ಹತ್ಯೆಯಾಗುತ್ತಿದೆ. ಬಿಜೆಪಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದರು.
ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇದು ದೇಶ ಕಟ್ಟುವ ಚುನಾವಣೆ, ದೇಶ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿ ಬದಕಲು ಸಾಧ್ಯ. ದೇಶದ ಸುರಕ್ಷತೆ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಭಾರತದ 26,585 ವಿದ್ಯಾರ್ಥಿಗಳ ರಕ್ಷಣೆಗಾಗಿ ಉಕ್ರೇನ್- ರಷ್ಯಾ ಯುದ್ಧವನ್ನು 8 ಗಂಟೆ ನಿಲ್ಲಿಸಿ, ಎಲ್ಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕರೆಯಿಂದ ಇದೆಲ್ಲ ಸಾಧ್ಯವಾಗಿದೆ. ಮೋದಿಯವರ ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕಾ, ಅರಬ್ ದೇಶ ನಾಯಕರು ಮೆಚ್ಚಿದ್ದಾರೆ. ಆದರೆ ನಮ್ಮ ದೇಶದ ಕಾಂಗ್ರೆಸ್ ನಾಯಕರಿಗೆ ಇದು ಅರ್ಥ ಆಗುತ್ತಿಲ್ಲ ಎಂದರು.
ನಮ್ಮ ಒಂದು ಮತದಿಂದ ರಾಮ ಮಂದಿರ, ಕಾಶಿ ಕಾರೀಡಾರ್, ಕಾಶ್ಮೀರ ಭಾರತದ ಭಾಗವಾಗಿ ಉಳಿದಿದೆ, ನಕ್ಸಲ್ ಚಟುವಟಿಕೆ ನಿಂತಿದೆ, ಭಯೋತ್ಪಾದಕರನ್ನು ಓಡಿಸಿದೆ. ಒಂದು ಮತದಿಂದ ಇಷ್ಟೆಲ್ಲ ಆಗಿದೆ. ಈ ಬಾರಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಲೀಡ್ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ ನಾರಾಯಣಗುರು ನಿಗಮ ಮಾಡಿದ್ದೆವು. ಮೀನುಗಾರರಿಗೆ, ಹಿಂದುಳಿದ ವರ್ಗಕ್ಕೆ ಸೌಲಭ್ಯ ಕಲ್ಪಿಸಿದ್ದು ಬಿಜೆಪಿ. ಆದರೆ ಅಧಿಕಾರಕ್ಕೆ ಬರುವ ಮೊದಲು ಸಿದ್ದರಾಮಯ್ಯ ಅವರು ತಿಂಗಳಿಗೆ 10ಕೆ.ಜಿ. ಅಕ್ಕಿ ನೀಡುತ್ತೇನೆ ಎಂದಿದ್ದರು. ಅಧಿಕಾರಕ್ಕೆ ಬಂದ ನಂತರ ಒಂದು ಕಾಳು ಅಕ್ಕಿಯನ್ನು ನೀಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ತಿಂಗಳು ಕರ್ನಾಟಕದ ಬಡವರಿಗೆ ಹಂಚಲು 25 ಲಕ್ಷ ಕ್ವಿಂಟಾಲ್ ಅಕ್ಕಿ ನೀಡುತ್ತಿದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಬೂತ್ ಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಬೂತ್ ಗೆಲ್ಲುವ ಮೂಲಕ ಕ್ಷೇತ್ರ, ದೇಶ ಗೆಲ್ಲೋಣ ಎಂದರು. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಕ್ಷೇತ್ರದಿಂದ 1 ಲಕ್ಷ ಲೀಡ್ ನೀಡಲಿದ್ದೇವೆ ಮತ್ತು ನರೇಂದ್ರ ಮೋದಿಯವರನ್ನು ಕೊಲ್ಲೂರಿಗೆ ಕರೆಸಲಿದ್ದೇವೆ. ನವದುರ್ಗೆಯರಿಂದ ಮೊದಲು ಮತದಾನ ಸಂಕಲ್ಪಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮೂಕಾಂಬಿಕಾ ಕಾರೀಡಾರ್ ಮೂಲಕ ಬೈಂದೂರು ಇನ್ನಷ್ಟು ಸಮೃದ್ಧವಾಗಲಿದೆ ಎಂದರು.
ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರೋಹಿತ್ ಶೆಟ್ಟಿ, ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಾಜೇಶ್ ಕಾವೇರಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
