ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿದಾಗ ಸಮೃದ್ಧ ಬದುಕು ಸಾಧ್ಯ – ಡಾ. ಜಿ.ಎಸ್.ಚಂದ್ರಶೇಖರ್ | ಕಂಡ್ಲೂರಿನಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಶಿಬಿರ
ಕುಂದಾಪುರ: ಸಂಘ ಸಂಸ್ಥೆಗಳು ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ಚಿಕುತ್ಸೆಗಳ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸಿದಾಗ ಸಮೃದ್ಧ ಬದುಕು ಸಾಧ್ಯ. ಪ್ರತಿಯೊಬ್ಬರಿಗೂ ಲಭ್ಯವಿರುವ ವಿವಿಧ ಆರೋಗ್ಯ ವಿಮೆಗಳ ಅರಿವು ಮೂಡಿಸಬೇಕು ಎಂದ ಅವರು, ಬೇರೆ ದೇಶಗಳಿಗಿಂತ ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಆರೋಗ್ಯ ಸೇವೆ ದೊರಕುತ್ತಿದೆ. ಆದರೆ ಇ.ಎಸ್.ಐ ದರವನ್ನು ಸರ್ಕಾರ ಪರಿಷ್ಕರಿಸಿದರೆ ಮಾತ್ರ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತದೆ ಎಂದು ಉಡುಪಿ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಜಿ.ಎಸ್.ಚಂದ್ರಶೇಖರ್ ಹೇಳಿದರು.









ಅವರು ಭಾನುವಾರ ಕುಂದಾಪುರ ತಾಲೂಕಿನ ಕಂಡ್ಲೂರಿನ ಝಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆದರ್ಶ ಆಸ್ಪತ್ರೆ, ಉಡುಪಿ, ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಜಿಲ್ಲೆ 317C ಹಾಗೂ ಝಿಯಾ ಎಜುಕೇಷನಲ್ ಟ್ರಸ್ಟ್, ಕಂಡ್ಲೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಚಂದ್ರಶೇಖರ್ ಹಾಗೂ ಅವರ ಪುತ್ರ ಡಾ. ಜಿ. ಸಿ. ಸುಹಾಸ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.







ಝಿಯಾ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ, ಉಡುಪಿ ಜಿಲ್ಲಾ ಖಾಜೀ, ಮೌಲಾನಾ ಉಬೈದುಲ್ಲಾ ಅಬೂಬಕ್ಕರ್ ನದ್ವಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿಯಿದ್ದರೂ, ಯಾವ ವೈದ್ಯರನ್ನು ಹೇಗೆ ಸಂಪರ್ಕಿಸಬೇಕು ಎಂಬ ಮಾಹಿತಿಯ ಕೊರತೆಯಿದೆ. ಇಂತಹಾ ಸಂದರ್ಭದಲ್ಲಿ ಆಸ್ಪತ್ರೆಗಳೇ ಗ್ರಾಮೀಣ ಭಾಗಕ್ಕೆ ಬಂದರೆ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಕುಟುಂಬಗಳೂ ಸೇರಿದಂತೆ ಎಲ್ಲರಿಗೂ ಸುಲಭ ಆರೋಗ್ಯ ಸಿಗುತ್ತದೆ. ನಮ್ಮ ಟ್ರಸ್ಟ್‌ನ ಎಲ್ಲಾ ಸದಸ್ಯರೂ ಶಿಬಿರದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಫಲಾನುಭವಿಗಳು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದರು.







ಲಯನ್ಸ್ ಕ್ಲಬ್ ನ 317 ಸಿ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್ ಮಾತನಾಡಿ, ಲಯನ್ಸ್ ಯಾವತ್ತೂ ಸಮಾಜ ಸೇವೆಯ ಮುಂಚೂಣಿಯಲ್ಲಿರುತ್ತದೆ. ಆರೋಗ್ಯ, ಶಿಕ್ಷಣ ಸಹಿತ ಎಲ್ಲಾ ಸಾಮಾಜಿಕ ಸೇವೆಗಳಿಗೆ ಲಯನ್ಸ್ ಸಿದ್ಧವಿದೆ. ಸಮಾಜ ಸೇವೆಯೇ ಲಯನ್ಸ್ ಧ್ಯೇಯ ಎಂದರು.







ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಸುದರ್ಶನ್ ಶೆಟ್ಟಿ ಬಿ.ಆರ್., ಕಂಡ್ಲೂರು ಜಾಮೀಯಾ ಮಸೀದಿ ಅಧ್ಯಕ್ಷ ಎಂ ಸುಹೈಲ್, ಉಡುಪಿ ಆದರ್ಶ ಆಸ್ಪತ್ರೆಯ ಎಂ.ಡಿ. ಡಾ. ಸುಹಾಸ್ ಜಿ.ಎಸ್., ಜಿಲ್ಲಾ ಜಿ.ಎ.ಟಿ ಸಲಹೆಗಾರ ಲಯನ್ ಅರುಣ್ ಕುಮಾರ್ ಹೆಗ್ಡೆ, ವಲಯ 1ರ ಚೇರ್ ಪರ್ಸನ್ ಪ್ರತಾಪಚಂದ್ರ ಶೆಟ್ಟಿ, ಝೋನ್ 2 ಚೇರ್ ಪರ್ಸನ್ ಲ. ಮೊಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.





ಝಿಯಾ ಶಾಲೆಯ ವಿದ್ಯಾರ್ಥಿನಿಯರಾದ ಫಾತಿಮಾ ಝಿಕ್ರಾ ಹಾಗೂ ರಝೀನಾ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಕಾರ್ಯದರ್ಶಿ ಗುರುಪ್ರಸಾದ್ ದೇವಾಡಿಗ ಸ್ವಾಗತಿಸಿ, ನಿರೂಪಿಸಿದರು. ಲಯನ್ ಜಗದೀಶ್ ವಂದಿಸಿದರು. ಉಚಿತ ಆರೋಗ್ಯ ಶಿಬಿರದಲ್ಲಿ 15ಕ್ಕೂ ಅಧಿಕ ತಜ್ಞ ವೈದ್ಯರು ಹೃದಯ ತಪಾಸಣೆ, ECG, ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್, ಕಣ್ಣಿನ ತಪಾಸಣೆ ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಯಿತು. ವೈದ್ಯರ ಸಲಹೆಯ ಮೇರೆಗೆ ಅಗತ್ಯವಿರುವವರಿಗೆ ಉಚಿತ ಔಷಧ ವಿತರಿಸಲಾಯಿತು.
