ಸಾಲಿಗ್ರಾಮ: ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ ತೃತೀಯ ಶ್ರಾವಣ ಶನಿವಾರ ಆಚರಣೆ
ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವಸ್ಥಾನದಲ್ಲಿ ತೃತೀಯ ಶ್ರಾವಣ ಶನಿವಾರ ಕಾರ್ಯಕ್ರಮವು ಆಗಸ್ಟ್ 29ರಂದು ಬೆಳಗ್ಗಿನಿಂದ ಸಂಜೆಯವರೆಗೆ ಸಂಭ್ರಮದಿಂದ ನಡೆಯಿತು.
ಸುಮಾರು 25 ಸಾವಿರಕ್ಕೂ ಮಿಕ್ಕಿ ಜನರು ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು. ಮಧ್ಯಾಹ್ನ ಸುಮಾರು ಆರು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬೋಜನ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭ ಕಲಾವಿದೆ ಪ್ರಕೃತಿ ಉರಾಳ ಮತ್ತು ಬಳಗದವರಿಂದ ವೀಣಾವಾದನ, ಮೀನಾ ಕಾರಂತ ಮತ್ತು ಬಳಗದವರಿಂದ ಭಕ್ತಿ ಸಂಗೀತ, ರಸರಂಗ ಮಹಿಳಾ ತಂಡದವರಿಂದ ಯಕ್ಷಗಾನ ತಾಳಮದ್ದಲೆ ಭಕ್ತ ಸುಧಾಮ ಕಾರ್ಯಕ್ರಮ ನಡೆಯಿತು. ಸಂಜೆ ಪುರೋಹಿತರು ಮತ್ತು ಅಧ್ಯಾಪನ ಮಾಡುತ್ತಿರುವ ಮಣೂರು ಚಂದ್ರಶೇಖರ ಅಡಿಗರು, ಶ್ರೀ ದೇವಳದ ಸರತಿ ಅರ್ಚಕರಾದ ಪಾರಂಪಳ್ಳಿ ಚಂದ್ರಶೇಖರ ಅಡಿಗರು, ಪುರೋಹಿತರಾದ ಕಟ್ಕೆರೆ ವಿಶ್ವನಾಥ ಐತಾಳರು, ಅರ್ಚಕರು ಮತ್ತು ಪುರೋಹಿತರಾದ ಹಂದಟ್ಟು ಸೀತಾರಾಮ ಭಟ್ ಮತ್ತು ಶ್ರೀದೇವಳದ ಪವಿತ್ರಪಾಣಿ ಪಾರಂಪಳ್ಳಿ ಗಣೇಶ ಐತಾಳ ಇವರೆಲ್ಲರನ್ನು ದಂಪತಿ ಸಮೇತರಾಗಿ ಸನ್ಮಾನಿಸಿ ಗೌರವಿಸಲಾಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ ಮತ್ತು ಸದಸ್ಯ ಕೆ.ತಾರಾನಾಥ ಹೊಳ್ಳ ವಂದಿಸಿದರು. ಕೋಶಾಧಿಕಾರಿ ಶ್ರೀ ಲಕ್ಷ್ಮೀನಾರಾಯಣ ಹೊಳ್ಳ, ಸದಸ್ಯ ಜಿ. ಪ್ರಕಾಶ್ ಮಯ್ಯ, ಪ್ರಸನ್ನ ತುಂಗ, ಮತ್ತು ಪ್ರಭಾರ ವ್ಯವಸ್ಥಾಪಕ ಗಣೇಶ ಭಟ್ ಉಪಸ್ಥಿತರಿದ್ದರು. ನಾಗರತ್ನ ಹೇರ್ಳೆ ನಿರೂಪಿಸಿದರು. ಬಳಿಕ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ (ರಿ) ಇವರಿಂದ ಯಕ್ಷಗಾನ ದಮಯಂತಿ ಪುನಃ ಸ್ವಯಂವರ ಪ್ರಸಂಗ ನಡೆಯಿತು.
