ಬಾರಕೂರು: ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಬೆಳೆಸಲು ಕ್ರೀಡೆ ಅತ್ಯಗತ್ಯ; ಡಾ. ರಮೇಶ್ ಶೆಟ್ಟಿಸುಜ್ಞಾನ ನ್ಯಾಷನಲ್ ಕಾಲೇಜಿನಲ್ಲಿ ಕಬಡ್ಡಿ ಪಂದ್ಯಾಟ- ಕೋಟ ವಿವೇಕ ಪದವಿ ಪೂರ್ವ ಕಾಲೇಜು ಪ್ರಥಮ
ಬಾರಕೂರು: ಶಿಕ್ಷಣದಷ್ಟೇ ಮಹತ್ವವನ್ನು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ನೀಡಬೇಕು. ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಬಾರಕೂರು ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಶಾಂತಾರಾಮ್ ಶೆಟ್ಟಿ ಹೇಳಿದರು. ಅವರು ಗುರುವಾರ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಹಾಗೂ ಬಾರಕೂರಿನ ಸುಜ್ಞಾನ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿ-2026 ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಹಾಗೂ ತಂಡದ ಮನೋಭಾವವನ್ನು ಬೆಳೆಸಲು ಕ್ರೀಡೆ ಅತ್ಯಗತ್ಯ ಎಂದರು. ಬಾರಕೂರು ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾಸಕ್ತಿ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.


ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಸುಜ್ಞಾನ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಸುಜನ್ ನಾಯಕ್ ಉಪಸ್ಥಿತರಿದ್ದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜು ಪುರುಷರ ಹಾಗೂ ಮಹಿಳೆಯರ ವಿಭಾಗದ ಪ್ರಥಮ ಸ್ಥಾನ ಪಡೆದುಕೊಂಡರೆ,
ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು, ಚೇರ್ಕಾಡಿ ಹಾಗೂ ಮಹಿಳೆಯ ವಿಭಾಗದಲ್ಲಿ ಎಸ್.ಡಿ.ಪಿ.ಟಿ. ಪದವಿ ಪೂರ್ವ ಕಾಲೇಜು, ಮಂದಾರ್ತಿ ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಬಾರಕೂರು ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಅವರು ವಿಜೇತ ತಂಡಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಫಲಕ ವಿತರಿಸಿದರು. ಕಾಲೇಜಿನ ಉಪನ್ಯಾಸಕ ಸುಜನ್ ನಾಯಕ್ ಸ್ವಾಗತಿಸಿದರು. ನೈನಾ ಜೆ. ಶೆಟ್ಟಿ ನಿರೂಪಿಸಿದರೆ, ಅನುಪಮ ವಂದಿಸಿದರು.
