BlogEconomyEducationGovernmentHighlightsHuman storiesLifestyleLocal newsOthersPoliticsState newsTop StoriesTrending

ಬೆಂಗಳೂರು: ಶಿಕ್ಷಕರ ದಿನಾಚರಣೆ ಪೂರ್ವಭಾವೀ ಸಭೆಗೆ ತನ್ನದೇ ನಿಯಮ ಉಲ್ಲಂಘಿಸಿದ ಶಿಕ್ಷಣ ಇಲಾಖೆ : ಶಿಕ್ಷಕರಿಂದ ಆಕ್ರೋಶ

Aware others:

ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಣ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈ ಹಿಂದೆ ಹೊರಡಿಸಿದ್ದ “ಶಿಕ್ಷಕರು ಶಾಲೆಯಲ್ಲಿ ಪಾಠವನ್ನು ಮಾತ್ರ ಮಾಡತಕ್ಕದ್ದು” ಎನ್ನುವ ಆದೇಶವನ್ನು ಶಿಕ್ಷಣ ಇಲಾಖೆಯೇ ಉಲ್ಲಂಘಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಹತ್ತು ಹಲವು ವಿನೂತನ  ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳಿಗಾಗಿ ಸೌಲಭ್ಯಗಳನ್ನು ಜಾರಿಗೊಳಿಸುತ್ತಿದೆ. ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ವಿದ್ಯಾರ್ಥಿಗಳ ಹಾಜರಾತಿ ವ್ಯವಸ್ಥೆ ನಿರಂತರ Appನ್ನು ಜಾರಿಗೆ ತಂದಿದೆ. ಶಿಕ್ಷಕರು ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಲು ಕಾಮ್ಸ್ KAAMS  ಎನ್ನುವ ಕರ್ನಾಟಕ ಸುಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇಷ್ಟೆಲ್ಲ ಇದ್ದರೂ ಕೂಡ ಕೆಲವು ಶಿಕ್ಷಕರು ಸಂಘಟನೆ ಹೆಸರಲ್ಲಿ ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಂಡು ತಾಲೂಕು ಹಾಗು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕಚೇರಿಗಳಿಗೆ ಅಲೆದಾಡಲು ಮತ್ತು ಅಲ್ಲಿ  ನಡೆಯುವ ವೇದಿಕೆ ಕಾರ್ಯಕ್ರಮಗಳಲ್ಲಿ ಕುಳಿತುಕೊಳ್ಳುವ ಉದ್ದೇಶದಿಂದ ರಾಜ್ಯಮಟ್ಟದ ಆಯುಕ್ತರ ಕಚೇರಿಯ ಕೆಲವು ಸಿಬ್ಬಂದಿಗಳಿಗೆ ಹಣದ ಆಮಿಷ ಒಡ್ಡಿ, ಅನಧಿಕೃತ ತಮ್ಮ ಸಂಘಗಳನ್ನು ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುವಂತೆ ಆದೇಶ ಮಾಡಿಸುತ್ತಿರುವುದು ಶಿಕ್ಷಚಣ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ವಾಸ್ತವ ಸತ್ಯವನ್ನು ಬಯಲುಗೊಳಿಸಿದೆ.

ಇದೀಗ ಆಗಸ್ಟ್ 20ರಂದು ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಅವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಚರ್ಚೆ ನಡೆಸುವ ಸಲುವಾಗಿ ಕರೆದ ಝೂಮ್ ಮೀಟಿಂಗ್ ಗೆ ಭಾಗವಹಿಸಲು ವಿವಿಧ ಸಂಘಗಳಿಗೆ ಆಹ್ವಾನಿಸಿದ್ದಾರೆ. ಅವರು ಆಹ್ವಾನಿಸಿದ ಸಂಘಗಳ ಪೈಕಿ ಕ್ರಮ ಸಂಖ್ಯೆ 26ರ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ ಬೆಂಗಳೂರು ಮತ್ತು ಕ್ರಮ ಸಂಖ್ಯೆ 24ರ ಜಾತಿ ಆಧಾರಿತ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವುಗಳನ್ನು ಆಹ್ವಾನಿಸಿದ್ದು, ಈ ಮೂಲಕ ಸರ್ಕಾರವೇ ಹೊರಡಿಸಿದ ರಾಜ್ಯಪತ್ರ ಮತ್ತು ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ. ಸರ್ಕಾರದ ರಾಜ್ಯಪತ್ರದ ಪ್ರಕಾರ ಯಾವುದೇ ನೌಕರರು ಜಾತಿಗಳ ಹೆಸರಿನಲ್ಲಿ ಸಂಘಗಳನ್ನು ಕಟ್ಟಿಕೊಳ್ಳುವಂತಿಲ್ಲ, ಆದರೆ ಆಯುಕ್ತರು ಕರೆದಿರುವ ಸಭೆಯ ಸೂಚನಾ ಪತ್ರದ ಆದೇಶದಲ್ಲಿ ಜಾತಿ ಆಧಾರಿತ ಶಿಕ್ಷಕರ  ಸಂಘಟನೆಗಳನ್ನು ಆಹ್ವಾನಿಸಲಾಗಿದೆ . ಇದು ಶಿಕ್ಷಕರುಗಳ ನಡುವೆ ಜಾತಿ ವೈಶಮ್ಯ ಉಂಟಾಗಲು ಕಾರಣವಾಗಿದೆ. ಅಲ್ಲದೆ ಉಳಿದ ಶಿಕ್ಷಕರಿಗೆ ತಮ್ಮ ಜಾತಿಯ ಸಂಘಟನೆಗಳನ್ನು ಕಟ್ಟಿಕೊಳ್ಳಬಹುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ ಎಂದು ಶಿಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಅಧಿಕೃತ ಮಾನ್ಯತೆ ಪಡೆದ ಸಂಘಗಳ ಮಾಹಿತಿಯನ್ನು ಸರ್ಕಾರದಿಂದ ಕೋರಿದ್ದರು. ಅದಕ್ಕೆ ಸಚಿವರು ಕೇವಲ ಐದು  ಸಂಘಗಳನ್ನು ಮಾತ್ರ ಮಾನ್ಯತೆ ಪಡೆದ ಸಂಘಗಳೆಂದು ಗುರುತಿಸಿದ್ದರು. ಆದರೆ ಇದೀಗ ಇಲಾಖೆಯ ಆಯುಕ್ತರು ಕರೆದ ಝೂಮ್ ಸಭೆಯಲ್ಲಿ ಅಧಿಕೃತವಲ್ಲದ ಸಂಘಗಳನ್ನು ಆಹ್ವಾನಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ಎಸ್.ಐ.ಆರ್, ಬಿಸಿಯೂಟ, ಹೀಗೇ ಕೆಲವು ಶಿಕ್ಷಕರು ಶಾಲೆಯಿಂದ ಹೊರಗಿದ್ದರೆ, ಅನಧಿಕೃತ ಸಂಘಗಳನ್ನು ಇಲಾಖೆಯ ಸಭೆಗಳಿಗೆ ಆಹ್ವಾನಿಸುತ್ತಿರುವ ಈ ಕ್ರಮದಿಂದ ಬಹುತೇಕ ಶಿಕ್ಷಕರು ಶಾಲೆಯಿಂದ ಹೊರಗೆ, ಮಕ್ಕಳು ಮಾತ್ರ ಶಾಲೆಯ ಒಳಗೆ ಎನ್ನುವಂತಾಗಿದೆ. ಇನ್ನಾದರೂ ಇಲಾಖೆ, ಸರ್ಕಾರ ಮುನ್ನೆಚ್ಚರಿಕೆಯ ಹೆಜ್ಜೆ ಇಡುವರೇ ಕಾದು ನೋಡಬೇಕಿದೆ.  


Aware others:

Leave a Reply

Your email address will not be published. Required fields are marked *

error: Content is protected !!