ಉಡುಪಿ: ಆರೋಪಿ ಶಾಸಕನಿಗೆ ‘ಸೆಲ್ಯೂಟ್’ ಹೊಡೆದ ಪಿಎಸ್‌ಐ ವಿರುದ್ಧ ತಕ್ಷಣ ಶಿಸ್ತುಕ್ರಮ ಜರುಗಿಸಿ: ಕೋಟ ನಾಗೇಂದ್ರ ಪುತ್ರನ್ ಆಗ್ರಹ

ಉಡುಪಿ: ಸಾರ್ವಜನಿಕರ ಹಿತರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು, ಆರೋಪಿಯೊಬ್ಬರಿಗೆ ಗೌರವ ಸಲ್ಲಿಸುವ ನೆಪದಲ್ಲಿ ವ್ಯವಸ್ಥೆಯನ್ನೇ ಅಣಕಿಸಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ನೋಟಿಸ್ ನೀಡಲು ತೆರಳಿದ್ದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ಸೆಲ್ಯೂಟ್ ಹೊಡೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ಕಾಲದಲ್ಲಿ ಕಾನೂನಿನ ಭಯದಿಂದ ತಿಂಗಳಿಗೆ ಮೂರ್ನಾಲ್ಕು ಬಾರಿ ಪೊಲೀಸ್ ಠಾಣೆಗೆ ಅಲೆದು, ರಿಜಿಸ್ಟರ್‌ಗೆ ಸಹಿ ಹಾಕಿ ಬರುತ್ತಿದ್ದ ಇತಿಹಾಸ ಹೊಂದಿರುವ ಒಬ್ಬ ಆರೋಪಿಗೆ ಇಲಾಖೆಯ ಅಧಿಕಾರಿಯೇ ಸಾಷ್ಟಾಂಗ ನಮಸ್ಕಾರ ಎಂಬಂತೆ ಸೆಲ್ಯೂಟ್ ಹೊಡೆಯುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಅಧಿಕಾರಿಗಳು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿರ್ಭಯವಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಭರವಸೆ ಜನರಲ್ಲಿದೆ. ಆದರೆ, ಆರೋಪಿ ಸ್ಥಾನದಲ್ಲಿರುವ ರಾಜಕಾರಣಿಯ ಎದುರು ಇಲಾಖೆಯ ಶಿಸ್ತು ಮತ್ತು ಆತ್ಮಾಭಿಮಾನವನ್ನು ಒತ್ತೆಯಿಟ್ಟು ಸೆಲ್ಯೂಟ್ ಹೊಡೆಯುವ ಅಧಿಕಾರಿಗಳ ನಡವಳಿಕೆ ಇಲಾಖೆಯ ಮೇಲಿರುವ ಜನಸಾಮಾನ್ಯರ ಗೌರವವನ್ನು ಕುಸಿಯುವಂತೆ ಮಾಡಿದೆ ಎಂದು ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಎಸೈ ರಾಜಕೀಯ ಒಲೈಕೆ ಮಾಡುತ್ತಿರುವುದು ಕಾಣಿಸುತ್ತಿದೆ. ಅಣ್ಣಾಮಲೈ, ಅರುಣ್ ಕುಮಾರ್ ರಂತಹಾ ದಕ್ಷ ಅಧಿಕಾರಿಗಳನ್ನು ಕಂಡಿರುವ ಉಡುಪಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕಾರಣಿಗಳಿಂದ ವಾಹನಗಳನ್ನು ದೇಣಿಗೆ ಪಡೆದು, ಅವರ ಮುಂದೆ ತಲೆಬಾಗಿ ಖಾಕಿ ಸಮವಸ್ತ್ರದ ಘನತೆಯನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಆಘಾತ ಮೂಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಸಾಬೀತುಪಡಿಸಬೇಕಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿ ಶಾಸಕನಿಗೆ ನೋಟಿಸ್ ನೀಡುವಾಗ ಅನಗತ್ಯವಾಗಿ ಸೆಲ್ಯೂಟ್ ಹೊಡೆದು ಇಲಾಖೆಗೆ ಮುಜುಗರ ತಂದಿಟ್ಟ ಆ ಪೊಲೀಸ್ ಅಧಿಕಾರಿಯ ವಿರುದ್ಧ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
