ತ್ರಾಸಿ: ಬೈಕ್ ಗಳ ಮುಖಾಮುಖಿ ಡಿಕ್ಕಿ – ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ
ಕುಂದಾಪುರ: ಸೋಮವಾರ ಮಧ್ಯಾಹ್ನ ಗಂಗೊಳ್ಳಿ ಪೊಲೀಸ್ ಠಾಣಾ ತ್ರಾಸಿ ಬೀಚ್ ಅರಮ ದೇವಸ್ಥಾನ ದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಬೈಕ್ ಗಳೆರಡರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದು ಬೈಕಿನ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರೆ, ಇನ್ನೊಂದು ಬೈಕಿನಲ್ಲಿದ್ದ ಸವಾರ ಗಂಭೀರ ಗಾಯಗಒಂಡು ಆಸ್ಪತ್ರೆಗೆ ದಾಖಲಾಗಿದ್ದು ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಭಟ್ಕಳದ ಸಣ್ಣಬಾವಿ ಸಾತುಮನೆ ನಿವಾಸಿ ನಾಗಪ್ಪ ನಾಯ್ಕ್ ಎಂಬುವರ ಮಗ ದೀಪಕ್ ನಾಗಪ್ಪ ನಾಯ್ಕ್ (23) ಸಾವನ್ನಪ್ಪಿದ್ದರು. ಗಂಭಿರ ಗಾಯಗೊಂಡ ಸ್ಕೂಟರ್ ಸವಾರ ಪಡುಕೋಣೆ ಹಡವು ನಿವಾಸಿ ಪ್ಯಾಟ್ರಿಕ್ ವಾಸ್ (63) ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಘಟನೆಯ ವಿವರ: ತ್ರಾಸಿ ಬೀಚ್‌ನ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಬದಿಯ ರಸ್ತೆಯಲ್ಲಿ ಅಂದರೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗಿನ ಏಕಮುಖ ರಸ್ತೆಯಲ್ಲಿ KA-47-EA-1850 ಮೋಟಾರು ಸೈಕಲ್‌ನ್ನು ದೀಪಕ ನಾಗಪ್ಪ ನಾಯ್ಕರವರು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಅದೇ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಬದಿಯ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅಂದರೆ ತ್ರಾಸಿ ಕಡೆಯಿಂದ ಮರವಂತೆ ಕಡೆಗೆ KA-20-EY-0841 ಸ್ಕೂಟರ್ ಸವಾರ ಪೆಟ್ರೀಕ್ ವಾಸ್ ರವರು ಸ್ಕೂಟರ್ ನಲ್ಲಿ ಪ್ಲೇನ್ಸೀಟಾ ಅವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.
