BlogEconomyEducationEntertainmentFashionHighlightsHuman storiesLifestyleLocal newsOthersState newsTop StoriesTrending

ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಸಿಕ ಸಭೆ

Aware others:

ಉತ್ತಮ ವರದಿಗೆ ಪ್ರಶಸ್ತಿ, ಶೈಕ್ಷಣಿಕ ನಿಧಿ ಘೋಷಣೆ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಅವರ ಪ್ರಾಯೋಜಕತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ಸಂಘದ ಸದಸ್ಯರ ಪ್ರತಿಭಾನ್ವಿತ ಎಸೆಸೆಲ್ಸಿ ಹಾಗೂ ಪಿಯುಸಿಯ ಇಬ್ಬರು ಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿಗಳಂತೆ ಶೈಕ್ಷಣಿಕ ನಿಧಿ ನೀಡುವ ಬಗ್ಗೆ ಮಹತ್ವ ತೀರ್ಮಾನ ಕೈಗೊಳ್ಳಲಾಗಿದೆ.

ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಅಧ್ಯಕ್ಷತೆಯಲ್ಲಿ ಜೂನ್ 2ರಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಂಘದ ಮಾಜಿ ಅಧ್ಯಕ್ಷ ದಿ.ಜಯಕರ ಸುವರ್ಣ ಹೆಸರಿನಲ್ಲಿ ಎಸೆಸೆಲ್ಸಿಯ ಒಬ್ಬ ವಿದ್ಯಾರ್ಥಿ/ನಿ ಹಾಗೂ ಸಂಘದ ಸದಸ್ಯರಾಗಿದ್ದ ದಿ.ಸಂದೀಪ್ ಪೂಜಾರಿ ಹೆಸರಿನಲ್ಲಿ ಪಿಯುಸಿಯ ಒಬ್ಬ ವಿದ್ಯಾರ್ಥಿ/ನಿಗೆ ಶೈಕ್ಷಣಿಕ ನಿಧಿ ನೀಡುವ ಬಗ್ಗೆಯೂ ತೀರ್ಮಾನಿಸಲಾಯಿತು. 

ಅಲ್ಲದೇ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಗಣೇಶ್ ಪ್ರಭು ಅವರ ಹೆಸರಿನಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಹಾಗೂ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರ ಪ್ರಾಯೋಜಕತ್ವದಲ್ಲಿ ಮೂರು ಪ್ರಶಸ್ತಿ ನೀಡುವ ಬಗ್ಗೆ ಸಭೆಯಲ್ಲಿ ಮಹತ್ವ ತೀರ್ಮಾನ ಕೈಗೊಳ್ಳಲಾಯಿತು. ಅವಿಭಜಿತ ದ.ಕ. ಜಿಲ್ಲೆಯ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತರ ಅತ್ಯುತ್ತಮ ವರದಿಗಾರಿಕೆಗೆ ಮತ್ತು ಉಡುಪಿ ಜಿಲ್ಲೆಯ ಕನ್ನಡ ಪತ್ರಿಕೆಯ ಪತ್ರಕರ್ತರ ಅತ್ಯುತ್ತಮ ವರದಿಗಾರಿಕೆಗೆ ಹಾಗೂ ಉಡುಪಿ ಜಿಲ್ಲೆಯ ಅತ್ಯುತ್ತಮ ಟಿವಿ ಮಾಧ್ಯಮ ವರದಿಗಾರಿಕೆಗೆ ಪ್ರೋತ್ಸಾಹಧನ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡು ತಲಾ‌ ಒಂದೊಂದು ಪ್ರಶಸ್ತಿ ನೀಡಲು ನಿರ್ಣಯಿಸಲಾಯಿತು.

ಪ್ರತಿವರ್ಷದಂತೆ ಜುಲೈ 1ರ ಪತ್ರಿಕಾ ದಿನಾಚರಣೆಯನ್ನು ಸಂಘದ ವತಿಯಿಂದ ಆಚರಿಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸಂಘದ ಸದಸ್ಯರ ಎಸೆಸೆಲ್ಸಿ ಹಾಗೂ ಪಿಯುಸಿಯ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್, ಪದಾಧಿಕಾರಿಗಳಾದ ಉದಯ ಮುಂಡ್ಕೂರು, ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಉಮೇಶ್ ಮಾರ್ಪಳ್ಳಿ, ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಸದಸ್ಯರಾದ ಹರೀಶ್ ಹೆಜಮಾಡಿ, ವಿಜಯ ಆಚಾರ್ಯ ಉಚ್ಚಿಲ, ಅಜಿತ್ ಆರಾಡಿ, ಗಣೇಶ್ ಸಾಯಿಬರಕಟ್ಟೆ, ಚೇತನ್ ಮಟಪಾಡಿ, ಪ್ರಮೋದ್ ಸುವರ್ಣ, ಮೋಹನ್ ಉಡುಪ, ನರೇಂದ್ರ ಹೆಬ್ರಿ, ಪ್ರಜ್ವಲ್, ರಾಜೇಶ್ ಗಾಣಿಗ ಹಾಜರಿದ್ದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಹಿಂದಿನ ಸಭೆಯ ನಿರ್ಣಯವನ್ನು ಮಂಡಿಸಿ, ಮಾಸಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಹರೀಶ್ ಕುಂದರ್ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!