ಕೊಲ್ಲೂರಿನಲ್ಲಿ ಭಾರೀ ಅಕ್ರಮ ಭೂ ಮಾಫಿಯಾ!
ಕಣ್ಮುಚ್ಚಿ ಕುಳಿತ ಇಲಾಖೆಗಳು, ನಿದ್ದೆಗೆ ಜಾರಿದ ಅಧಿಕಾರಿಗಳು!!
ಕೊಲ್ಲೂರು: ವಿಶ್ವ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ಯಾಯ ಅನಾಚಾರಗಳು ಎಗ್ಗಿಲ್ಲದೇ ನಡೆಯುತ್ತಿದ್ದರೆ ಸಂಬಂಧಪಟ್ಟ ಸರ್ಕಾರೀ ಯಂತ್ರಗಳು ತುಕ್ಕು ಹಿಡಿದು ಮಲಗಿವೆ!. ಜನಹಿತ ಕಾಯಬೇಕಾಗಿದ್ದ, ಸಾಮಾಜಿಕ ನ್ಯಾಯ ನೀಡಬೇಕಿದ್ದ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರೆ. ಪಟ್ಟಾ ಜಮೀನಿನ ನಕ್ಷೆ ನೀಡಿ ಲಾಡ್ಜ್ ಗಳು, ವಸತಿ ಸಮುಚ್ಛಯಗಳು, ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೆ, ಆಮಿಷಕ್ಕೆ ಬಲಿಯಾದಂತೆ ವರ್ತಿಸುತ್ತಿರುವ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ನಿರ್ಲಜ್ಜ ಅಧಿಕಾರಿಗಳು ಅನ್ಯಾಯದ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪಗಳು ಕೊಲ್ಲೂರು ಅಭಯಾರಣ್ಯದಲ್ಲಿ ಮೌನವಾಗಿ ರೋಧಿಸುತ್ತಿವೆ.!

ಹೌದು. ಕೊಲ್ಲೂರು ಭೂ ಮಾಫಿಯಾಕ್ಕೆ ಕಡಿವಾಣ ಹಾಕಲು ಸ್ವತಃ ಜಿಲ್ಲಾಡಳಿತವೂ ಹೆದರುತ್ತಿದೆಯೇ ಎನ್ನುವ ಅನುಮಾನವೊಂದು ಈಗ ಕೊಲ್ಲೂರಿನ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಅಕ್ರಮ ಸಕ್ರಮ, 53, 57, 94ಸಿ ಹೀಗೇ ಬಡವರಿಗೆ ಸಿಗಬೇಕಾದ ಸರ್ಕಾರೀ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು ಒಂದೇ ಕುಟುಂಬದ ಹಲವರ ಹೆಸರಿನಲ್ಲಿ ಎಕರೆಗಟ್ಟಲೆ ಭೂ ಕಬಳಿಕೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರೀ ಭೂಮಿಯಲ್ಲಿ ಐಷಾರಾಮಿ ಲಾಡ್ಜನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಶ್ರೀ ಮೂಕಾಂಬಿಕಾ ದೇವಸ್ಥಾನದ ಮೂಲಕ ವಿಶ್ವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಲ್ಲೂರು ಪ್ರವಾಸಿ ಕೇಂದ್ರವಾಗಿಯೂ ಹೊರಹೊಮ್ಮಬೇಕಾಗಿತ್ತು. ಆದರೆ ಯಾವುದೇ ಅಭಿವೃದ್ಧಿಗೆ ಜಮೀನು ಕೊರತೆಯಿದೆ ಎಂದು ಇಲಾಖೆಗಳು ಸಬೂಬು ಹೇಳುತ್ತಿದ್ದಾರೆ. ವಾಸ್ತವವಾಗಿ ಇಲ್ಲಿ ನಡೆಯುತ್ತಿರುವ ಅಕ್ರಮಗಳ ತನಿಖೆಯಾದರೆ ಒತ್ತುವರಿ ಭೂಮಿ, ನಕಲಿ ದಾಖಲೆಗಳು ಬಹಿರಂಗವಾಗಲಿವೆ. ಮಾತ್ರವಲ್ಲ ಪ್ರವಾಸೋದ್ಯಮ ಕ್ಷೇತ್ರವಾಗಿ ಹೊರಹೊಮ್ಮಲು ಕೊಲ್ಲೂರಿನಲ್ಲಿ ಸಾಕಷ್ಟು ಸರ್ಕಾರೀ ಭೂಮಿಯೂ ಸಿಗಲಿದೆ. ಆದರೆ ಈ ನಿಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಅಕ್ರಮ ಭೂಗಳ್ಳರ ಜೊತೆಗೆ ಶಾಮೀಲಾಗಿದ್ದಾರೆಯೇ ಎನ್ನುವ ಅನುಮಾನ ಸೃಷ್ಟಿಸಿದೆ.
ಇಲ್ಲಿನ ಮುಕುಂದ ಹಾಗೂ ಆತನ ಮಗ ರಾಘವೇಂದ್ರ ಜೊತೆಯಾಗಿ ಕೊಲ್ಲೂರಿನಲ್ಲಿ ಅಕ್ರಮ ಭೂವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎನ್ನುವ ವ್ಯಾಪಕ ಆರೋಪಗಳು ಸಾಲು ಸಾಲಾಗಿ ಕೇಳಿ ಬರುತ್ತಿವೆ. ಅಕ್ರಮ ಸಕ್ರಮದ ನಿಯಮದಂತೆ ನಾಲ್ಕೂವರೆ ಎಕ್ರೆಗೆ ಅರ್ಜಿ ಸಲ್ಲಿಸಬಹುದು. ಆದರೆ ಮುಕುಂದ ಹಾಗೂ ರಾಘವೇಂದ್ರ ಸೇರಿಕೊಂಡು ಸುಮಾರು 9 ಎಕ್ರೆಗಿಂತಲೂ ಹೆಚ್ಚು ಜಾಗವನ್ನು ಅಕ್ರಮ ಸಕ್ರಮದಡಿಯಲ್ಲಿ ತಮ್ಮ ಸ್ವಂತದ್ದನ್ನಾಗಿ ಮಾಡಿಕೊಳ್ಳುವ ಸ್ಕೆಚ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಕ್ರಮ ಹೇಗೆ?: ವಾಸ್ತವವಾಗಿ ತಮ್ಮ ಸ್ವಾಧೀನವಿರುವ ಪಟ್ಟಾ ಭೂಮಿಯನ್ನು ದಾಖಲೆಯನ್ನಾಗಿಟ್ಟು, ಭೂ ಪರಿವರ್ತನೆ ಮಾಡಿಕೊಳ್ಳಲಾಗುತ್ತದೆ. ಅದೇ ದಾಖಲೆಯನ್ನಿಟ್ಟು ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದುಕೊಳ್ಳಲಾಗಿದೆ. ಬಳಿಕ ಅದೇ ಪರವಾನಿಗೆಯನ್ನಿಟ್ಟುಕೊಂಡು ಸರ್ಕಾರೀ ಜಮೀನಿನಲ್ಲಿ ಕಟ್ಟಡ ನಿರ್ಮಿಸಿ ವಾಣಿಜ್ಯೋದ್ಯಮ, ಲಾಡ್ಜ್ ಗಳ ಮೂಲಕ ಅಕ್ರಮ ವ್ಯವಹಾರ ನಡೆಸಲಾಗುತ್ತಿದೆ ಎನ್ನುವ ಆರೋಪವಿದೆ. ಆರಂಭದಲ್ಲಿ ಸ.ನಂ. 40/40 ರಲ್ಲಿ ಹತ್ತು ಸೆಂಟ್ಸ್ ಪಟ್ಟಾ ಭೂಮಿಯಲ್ಲಿ ಅಕ್ರಮವಾಗಿ ಪೇ ಪಾರ್ಕಿಂಗ್, ಬಳಿಕ ಇದೇ ಸ್ಥಳದಲ್ಲಿ ಬಗ್ಗೆ ಸುಳ್ಳು ದಾಖಲೆ ನಿರ್ಮಾಣ. ಅಷ್ಟೇ ಅಲ್ಲದೇ ಇದೇ ಸ.ನಂ.ನ್ನು ದಾಖಲೆಯಾಗಿಟ್ಟುಕೊಂಡು ಸ.ನಂ.131ರಲ್ಲಿ ಮನೆ, ಹೋಟೆಲ್ ಲಾಡ್ಜ್, ಕಾಂಕ್ರೀಟ್ ಕಟ್ಟಡ ನಿರ್ಮಾಣ, ಮಕ್ಕಳಾದ ಸುಲೋಚನಾ ಹೆಸರಿನಲ್ಲಿ ಸರ್ವೆ ನಂಬ್ರ 40/38 ರಲ್ಲು ಹತ್ತು ಸೆಂಟ್ಸ್, ನಾಗರತ್ನ ಹೆಸರಿನಲ್ಲಿ ಸರ್ವೆ ನಂಬ್ರ 40/39ದಲ್ಲಿ ಹತ್ತು ಸೆಂಟ್ಸ್ 10, 40/32ರಲ್ಲಿ ಮತ್ತೆ ಮುಕುಂದನಿಗೆ 20 ಸೆಂಟ್ಸ್, ಸರ್ವೆ ನಂಬ್ರ 40/33 ರಲ್ಲಿ 25 ಸೆಂಟ್ಸ್, ಸ್ಥಳೀಯ ನಾಗ ದೇವಾಡಿಗ ಅವರಿಗೆ ಸೇರಿದ ಕುಂಬಾರ ಹೊಂಡ ಎಂಬಲ್ಲಿರುವ ಕುಮ್ಕಿಯಲ್ಲಿ ಇದ್ದ ಹಂಚಿನ ಹಳೆ ಮನೆ ದುರಸ್ಥಿ ನೆಪದಲ್ಲಿ ಪಂಚಾಯತ್ ಸಹಾಯದಲ್ಲಿ ಸರ್ವೆ ನಂಬ್ರ 131ರಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗಿದೆ.

ಭೂಮಾಫಿಯಾಕ್ಕೆ ಪಂಚಾಯತ್ ಸಾಥ್?! : 2021ರಲ್ಲಿ ತಳ್ಳುಗಾಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಮುಕುಂದನ ವಿರುದ್ಧ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಕೊಲ್ಲೂರು ಗ್ರಾಮ ಪಂಚಾಯತ್ ಕೇವಲ ಹತ್ತು ರೂಪಾಯಿ ದಂಡ ವಿಧಿಸಿ ಮುಕುಂದನ ವ್ಯಾಪಾರ ಸಕ್ರಮಗೊಳಿಸಿಬಿಡುತ್ತದೆ. ಅದೇ ತಳ್ಳುಗಾಡಿ ಈಗ ಸರ್ಕಾರೀ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಶ್ರೀದೇವಿ ಕ್ಯಾಂಟೀನ್!. ಅಲ್ಲೂ ಗೋಲ್ ಮಾಲ್ ಮಾಡಿರುವ ಗ್ರಾಮ ಪಂಚಾಯತ್ ಶ್ರೀದೇವಿ ಕ್ಯಾಂಟೀನ್ ಗೆ ನೀಡಿರುವ 2/106 ಸಂಖ್ಯೆ ನೀಡುತ್ತದೆ. ವಾಸ್ತವವಾಗಿ 2/106 ವಿ.ಕೆ.ನಾರಾಯಣ್ ಎನ್ನುವವರ ಜಾಗ! ಈ ಜಾಗ ದೇವಸ್ಥಾನದ ಹಿಂಬದಿಯ ಗುಡ್ಡದಲ್ಲಿದ್ದರೆ ರಾಘವೇಂದ್ರ ನಿರ್ಮಿಸಿಕೊಂಡಿರುವ ಅದೇ ಸಂಖ್ಯೆಯ ಅಕ್ರಮ ಶ್ರೀದೇವಿ ಕ್ಯಾಂಟೀನ್ ಇರುವುದು ನಿಟ್ಟೂರು ರಸ್ತೆಯ ಸರ್ಕಾರೀ ಪ್ರವಾಸಿ ಬಂಗಲೆಯ ಸಮೀಪ!. ಅಂದರೆ ವಿ.ಕೆ.ನಾರಾಯಣ್ ಅವರದ್ದೂ 2/106. ಅಕ್ರಮ ಕ್ಯಾಂಟೀನ್ ದ್ದೂ 2/106! ಇಷ್ಟೇ ಅಲ್ಲದೇ ಸರ್ವೇನಂಬ್ರ 121ರಲ್ಲಿ ಎಕರೆಗಟ್ಟಲೆ ಭೂಮಿಗೆ ಆವರಣ ಗೋಡೆ ನಿರ್ಮಿಸಿ ಅಕ್ರಮವಾಗಿ ಕಬ್ಜಾ ಮಾಡಿಕೊಂಡಿದ್ದು ಇಲಾಖೆಗಳ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಬಂಗ್ಲೇಗುಡ್ಡೆ ಎಂಬಲ್ಲಿ ಸ.ನಂ.131ರಲ್ಲಿ 3 ಎಕರೆ ಜಮೀನಿಗೂ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಕಾಯ್ದಿರಿಸಲಾಗಿದೆ. ಆದರೆ ಇದೆಲ್ಲವನ್ನೂ ಕಂಡೂ ಕಾಣದಂತಿರುವ ಸ್ಥಳೀಯಾಡಳಿತ, ಕಂದಾಯ ಇಲಾಖೆ, ಅರಣ್ಯ ಇಲಾಖೆಗಳು ಯಾವುದೋ ಆಮಿಷಕ್ಕೆ ಬಲಿಯಾದಂತೆ ವರ್ತಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಈ ಎಲ್ಲಾ ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ಭರಿಸುವ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ.
