ತೆಕ್ಕಟ್ಟೆ|ಮಲ್ಪೆ: ಅಪ್ರಾಪ್ತೆಯ ಸರಣಿ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಮೂಲಕ ಚಿನ್ನಾಭರಣ ಲೂಟಿ – ತೆಕ್ಕಟ್ಟೆಯ ಇಬ್ಬರ ಬಂಧನ
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿಯನ್ನು ಲಾಡ್ಕ್ ನಲ್ಲಿ ಸರಣಿ ಅತ್ಯಾಚಾರ ನಡೆಸಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ವಂಚಿಸಿರುವ ಘಟನೆಗೆ ಸಂಬಂಧಿಸಿ ತೆಕ್ಕಟ್ಟೆಯ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ತೆಕ್ಕಟ್ಟೆಯ ಜಿತೇಂದ್ರ ಶೆಟ್ಟಿ ಹಾಗೂ ಸುಶಾನ್ ಪೂಜಾರಿ ಎಂದು ಗುರುತಿಸಲಾಗಿದೆ.

ಕೊಡವೂರು ಮಲ್ಪೆಯ ಅಪ್ರಾಪ್ತ ಬಾಲಕಿಗೆ ಮಾರ್ಚ್ ತಿಂಗಳಲ್ಲಿ ‘ಸ್ನಾಪ್‌ಚಾಟ್’ ಮೂಲಕ ಸುಶಾನ್ ಪೂಜಾರಿ ಪರಿಚಯವಾಗಿದ್ದು, ಆತನ ಮೂಲಕ ಜಿತೇಂದ್ರನ ಪರಿಚಯವಾಗಿದೆ. ಬಳಿಕ ಜಿತೇಂದ್ರ ಮಾರ್ಚ್ 25ರಂದು ಬ್ರಹ್ಮಾವರದ ಬಾರ್ಕೂರು-ಮಂದಾರ್ತಿ ರಸ್ತೆಯಲ್ಲಿರುವ ‘ಲಾಡ್ಜ್’ಗೆ ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಜೀವಬೆದರಿಕೆ ಒಡ್ಡಿದ್ದಾನೆ.
ಇದಾದ ಬಳಿಕ ಜಿತೇಂದ್ರನು ಬಾಲಕಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನನ್ನ ತಂದೆಗೆ ಪಾರ್ಶ್ವವಾಯು (Paralysis) ಆಗಿದ್ದು, ತುರ್ತು ಹಣದ ಅಗತ್ಯವಿದೆ. ಮನೆಯಿಂದ ಚಿನ್ನಾಭರಣ ತಂದುಕೊಡು, ಒಂದು ವಾರದಲ್ಲಿ ಬಿಡಿಸಿಕೊಡುತ್ತೇನೆ ಎಂದು ನಂಬಿಸಿದ್ದು ಸಂತ್ರಸ್ಥೆ ಬಾಲಕಿ ಏಪ್ರಿಲ್ ಮೊದಲ ವಾರದಲ್ಲಿ ಮನೆಯಲ್ಲಿದ್ದ ಕಿವಿಯೋಲೆ, ಚಿನ್ನದ ಉಂಗುರಗಳು, ಗಣಪತಿ ಪೆಂಡೆಂಟ್ ಒಳಗೊಂಡ ಚೈನ್ ಸೇರಿದಂತೆ ಭಾರಿ ಪ್ರಮಾಣದ ಒಡವೆಗಳನ್ನು ತಂದು ರೈಲ್ವೇ ಗೇಟ್ ಬಳಿ ಬೈಕ್‌ನಲ್ಲಿ ಬಂದಿದ್ದ ಜಿತೇಂದ್ರ ಮತ್ತು ಸುಶಾನ್‌ಗೆ ನೀಡಿದ್ದಾಳೆ.
15 ದಿನಗಳ ಬಳಿಕ, ಕೊಟ್ಟ ಚಿನ್ನವನ್ನು ಬಿಡಿಸಬೇಕಾದರೆ ಇನ್ನುಳಿದ ಚಿನ್ನವನ್ನೂ ತರಬೇಕೆಂದು ಆರೋಪಿಗಳು ಬಾಲಕಿಯನ್ನು ನಂಬಿಸಿದ್ದಾರೆ. ಅದರಂತೆ ಆಕೆ ಮನೆಯಲ್ಲಿದ್ದ 2 ಚಿನ್ನದ ಚೈನ್, ಒಂದು ರಿಂಗ್ ಹಾಗೂ ಪೆಂಡೆಂಟ್ ಸೇರಿದಂತೆ ಸುಮಾರು 71 ಗ್ರಾಂ ತೂಕದ ಚಿನ್ನಾಭರಣಗಳನ್ನು ಬಾಲಕಿಯಿಂದ ದೋಚಿದ್ದಾರೆ.
ಬಳಿಕ ಎಪ್ರಿಲ್ ಒಂದರಂದು ಕಾರಿನಲ್ಲಿ ಹಾಗೂ ಎಪ್ರಿಲ್ ಹದಿನೈದರಂದು ಆರೋಪಿಗಳು ಬೈಕ್‌ನಲ್ಲಿ ಬಂದು ಆಕಾಶವಾಣಿ ಬಳಿಯಿಂದ ಬಾಲಕಿಯನ್ನು ಮತ್ತೆ ಅದೇ ಲಾಡ್ಜ್‌ಗೆ ಕೊಂಡೊಯ್ದು ಲೈಂಗಿಕಕ್ರಿಯೆ ನಡೆಸಿದ್ದಾರೆ.
ಇತ್ತ ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಹಾಗೂ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಮಗಳಲ್ಲಿ ವಿಚಾರಿಸಿದಾಗ ಈ ಇಡೀ ಭೀಕರ ದೌರ್ಜನ್ಯ ಮತ್ತು ವಂಚನೆಯ ಜಾಲ ಬೆಳಕಿಗೆ ಬಂದಿದೆ. ತಕ್ಷಣವೇ ಸಾರ್ವಜನಿಕರ ನೆರವಿನೊಂದಿಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ
ಆರೋಪಿಗಳು ಹಿಂದಿನಿಂದಲೂ ಕಾಲೇಜು ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿ, ಬಳಿಕ ಭಾವನಾತ್ಮಕವಾಗಿ ವಂಚಿಸಿ ದೌರ್ಜನ್ಯ ಹಾಗೂ ಹಣ-ಚಿನ್ನಾಭರಣ ದೋಚುವ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಡುಪಿ ಮಹಿಳಾ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.
