ಕರಾವಳಿಯನ್ನು ಬೆಚ್ಚಿ ಬೀಳಿಸಿದ ಗಾಂಜಾ ಜಾಲ – ಸಾಗರ ಮೂಲದ, ಕುಂದಾಪುರದ ಕಾಲೇಜು ವಿದ್ಯಾರ್ಥಿನಿ ಆರೆಸ್ಟ್! 35 ಲಕ್ಷ ಮೌಲ್ಯದ ಗಾಂಜಾ ಪೊಲೀಸ್ ವಶಕ್ಕೆ

ಕುಂದಾಪುರ: ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬರೊಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಕುಂದಾಪುರ ಸಹಿತ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದಲ್ಲಿ ಮೂಲ್ಕಿ ಪೊಲೀಸರಿಂದ ಬಂಧಿಸಲ್ಪಟ್ಟ ವಿದ್ಯಾರ್ಥಿನಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ, ಕುಂದಾಪುರದ ಪ್ರತಿಷ್ಟಿತ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನ (21) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 42 ಗ್ರಾಂ ಹೈಡೋವಿಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಂದಾಪುರದ ವಡೇರಹೋಬಳಿಯ ಜೆ.ಎಲ್.ಬಿ – ವಿಠಲವಾಡಿ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಆರೋಪಿ ಸುಹಾನಾ ಮೇ 12ರ ಮಂಗಳವಾರ ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಸುಹಾನಾ ಚೆನ್ನೈಯಿಂದ ಮಾದಕ ವಸ್ತು ತರಿಸಿಕೊಂಡು ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಕರಾವಳಿ ಭಾಗದಲ್ಲಿ ಮಾರಾಟ ಮಾಡುವ ಮೂಲಕ ಹಣ ಸಂಪಾದನೆಗೆ ಮುಂದಾಗಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಈಕೆಯ ವಿರುದ್ಧ ಈ ಹಿಂದೆ ಕಾವೂರು ಪೊಲೀಸ್ ಠಾಣೆಯಲ್ಲಿ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ವಿಭಾಗದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಗಾಂಜಾದ ಜೊತೆಗೆ ಮಾದಕ ದಂಧೆಯಲ್ಲಿ ಆಕೆ ತೊಡಗಿಸಿಕೊಂಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.
