ಕುಂದಾಪುರ: ನೀಟ್ ಪರೀಕ್ಷೆಯ ಭಯ – ಮನೆ ಬಿಟ್ಟು ಹೋದ ಪಿ.ಯು. ವಿದ್ಯಾರ್ಥಿ ನಾಪತ್ತೆ! ಪೋಷಕರಲ್ಲಿ ಆತಂಕ
ಕುಂದಾಪುರ: ನೀಟ್ (NEET) ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬ ಪರೀಕ್ಷಾ ಫಲಿತಾಂಶಕ್ಕೆ ಭಯಪಟ್ಟು ಮನೆ ಬಿಟ್ಟು ನಾಪತ್ತೆಯಾದ ಆತಂಕಕಾರಿ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಿತ್ರಪಾಡಿ ಗ್ರಾಮದ ನಿವಾಸಿ ಅಭಿಷೇಕ್ ಎಸ್. ರಾಜ್ (17) ನಾಪತ್ತೆಯಾದ ವಿದ್ಯಾರ್ಥಿ.

ಘಟನೆಯ ವಿವರ: ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಅಭಿಷೇಕ್ ಕಳೆದ ಶನಿವಾರ (ಮೇ 3) ಉಡುಪಿಯಲ್ಲಿ ನೀಟ್ ಪರೀಕ್ಷೆ ಬರೆದಿದ್ದನು. ಮೇ 4ರ ಭಾನುವಾರ ಮಧ್ಯಾಹ್ನ ಸುಮಾರು 3:30 ಗಂಟೆಗೆ ಹಾಸನದಲ್ಲಿರುವ ತನ್ನ ತಾಯಿಗೆ ಕರೆ ಮಾಡಿ, ಮಣಿಪಾಲಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದನು. ಆದರೆ ಸಂಜೆಯಾದರೂ ಆತ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಮನೆಯಲ್ಲಿ ಆತ ಬರೆದು ಇಟ್ಟಿದ್ದ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.
ಪರೀಕ್ಷೆಯ ತೀವ್ರ ಒತ್ತಡ ಅಥವಾ ಫಲಿತಾಂಶದ ಆತಂಕದಿಂದ ಆತ ಮನೆ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಆತನ ತಂದೆ ನಟರಾಜ ಸಿ. ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದ ಹುಡುಗನ ಚಹರೆ: 5 ಅಡಿ 9 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ.
ಭಾಷೆ: ಕನ್ನಡ, ಇಂಗ್ಲಿಷ್ ಮತ್ತು ಹಿಂದಿ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ
ಆತನ ಬಳಿ ಒಂದು ಟ್ರಾಲಿ ಬ್ಯಾಗ್ ಹಾಗೂ ಬೆನ್ನಿಗೆ ಹಾಕುವ ಬ್ಯಾಗ್ ಇತ್ತು.
ಈ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅ.ಕ್ರ ಸಂಖ್ಯೆ 75/2026, ಕಲಂ: 137(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಚಹರೆಯುಳ್ಳ ಹುಡುಗ ಎಲ್ಲಾದರೂ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ.
ಕೋಟ ಪೊಲೀಸ್ ಠಾಣೆ: 0820-2564155 ಬ್ರಹ್ಮಾವರ ವೃತ್ತ ನಿರೀಕ್ಷಕರು: 0820-2561966
ಅಂಕಗಳಿಕೆಯ ಯಂತ್ರಗಳನ್ನಾಗಿಸುವ ಭರದಲ್ಲಿ ಶಿಕ್ಷಣ ಸಂಸ್ಥೆಗಳು, ಪೋಷಕರು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ನೂಕುತ್ತಿರುವುದು ಆತಂಕಕಾರಿ ಸಂಗತಿ. ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಪೋಷಕರು ನಿರ್ಲಕ್ಷ್ಯವಹಿಸುತ್ತಿರುವುದು ಇಂತಹಾ ಘಟನೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಆಘಾತಕಾರಿ.
